

ಬೆಂಗಳೂರು: ಉಪ ಚುನಾವಣೆಯು ಪಕ್ಷ ಹಾಗೂ ಸರ್ಕಾರಕ್ಕೆ ಪ್ರಿಪರೇಟರಿ ಎಕ್ಸಾಂ ಇದ್ದಂತೆ. ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದು. ಅಭಿಪ್ರಾಯ ರೂಪುಗೊಳ್ಳುವುದು ಸಹಜ. ಫೈನಲ್ ಎಕ್ಸಾಂ ಆಗಿದ್ದ 17 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಈಗಾಗಲೇ ತೇರ್ಗಡೆಯಾಗಿದ್ದೇವೆ ಎಂದು ಪಕ್ಷದ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ಲೇಷಿಸಿದರು.
ಈಗ ನಡೆಯಲಿರುವ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಆರ್.ಆರ್. ನಗರ ಜತೆಗೆ ಒಂದು ಬಾರಿಯೂ ಗೆಲ್ಲದ ಶಿರಾ ಕ್ಷೇತ್ರದಲ್ಲಿ ಜಯ ಸಾಧಿಸುವ ವಿಶ್ವಾಸವಿದೆ. ಶಿರಾ, ಆರ್.ಆರ್. ನಗರ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳು, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಒಮ್ಮತದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದರು. ಇದನ್ನೂ ಓದಿರಿ ರಾಜರಾಜೇಶ್ವರಿ ನಗರ, ಶಿರಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟ
ಶಿರಾ, ರಾಜರಾಜೇಶ್ವರಿ ನಗರ ಸೇರಿದಂತೆ ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಯಾರು ಎಂಬುದನ್ನು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ ಎಂದ ಸಿ.ಟಿ.ರವಿ, ಒಬ್ಬ ವ್ಯಕ್ತಿಗೆ ಒಂದು ಹುದ್ದೆ ನಿಯಮ ಇದೆಯೋ ಇಲ್ಲವೋ ಗೊತ್ತಿಲ್ಲ. ವರಿಷ್ಠರು ಸೂಚಿಸಿದರೆ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸ್ಪಷ್ಟಪಡಿಸಿದರು.