ಬೀಜಿಂಗ್: ಡ್ರೈವಿಂಗ್ ಪರೀಕ್ಷೆ ಮುಗಿಸಿ ಲೈಸೆನ್ಸ್ ಪಡೆದ ಹತ್ತೇ ನಿಮಿಷದಲ್ಲಿ ಚಾಲಕನೊಬ್ಬ ತನ್ನ ಕಾರನ್ನು ಸೇತುವೆಯಿಂದ ನದಿಗೆ ಹಾರಿಸಿದ ಘಟನೆ ಚೀನಾದಲ್ಲಿ ನಡೆದಿರುವುದಾಗಿ ಶುಕ್ರವಾರ ವರದಿಯಾಗಿದೆ.
ಚಾಲಕನನ್ನು ಜಾಂಗ್ ಎಂದು ಗುರುತಿಸಲಾಗಿದೆ. ಡ್ರೈವಿಂಗ್ ಲೈಸೆನ್ಸ್ ಪಡೆದ ಬಳಿಕ ಇಲಾಖೆಯಿಂದ ಬಂದ ಅಭಿನಂದನಾ ಸಂದೇಶಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ಕಾರಿನ ನಿಯಂತ್ರಣ ಕಳೆದುಕೊಂಡು ನದಿಗೆ ಹಾರಿಸಿದ್ದಾನೆ.
ಫೆ. 21ರಂದು ಚೀನಾದ ಜುನಿ ನಗರದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜುನಿ ಸಂಚಾರಿ ಪೊಲೀಸರು ಘಟನೆಗೆ ಸಂಬಂಧಪಟ್ಟ ಫೋಟೋವನ್ನು ಚೀನಾ ಸಾಮಾಜಿಕ ಜಾಲತಾಣ ವೇದಿಕೆ “ವೈಬೊ”ದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಘಟನೆ ಸಂಬಂಧ ಮಾತನಾಡಿರುವ ಜಾಂಗ್, ನಾನು ಡ್ರೈವಿಂಗ್ ಮಾಡುವ ವೇಳೆ, ನನ್ನ ಮೊಬೈಲ್ಗೆ ಬಂದ ಸಂದೇಶ ಓದುತ್ತಿದ್ದೆ. ಈ ವೇಳೆ ಸೇತುವೆ ಮೇಲೆ ಎದುರುಗಡೆಯಿಂದ ಇಬ್ಬರು ವ್ಯಕ್ತಿಗಳು ಬರುತ್ತಿದ್ದರು. ಅವರನ್ನು ನೋಡಿ ಇದಕ್ಕಿದ್ದಂತೆ ತಳಮಳಗೊಂಡು ತಕ್ಷಣ ಕಾರನ್ನು ಎಡಕ್ಕೆ ತಿರುಗಿಸಿದೆ. ಕಾರು ನದಿಗೆ ಹಾರಿತು. ಅದೃಷ್ಟವಶಾತ್, ಕಾರಿನ ಬಾಗಿಲನ್ನು ಒದ್ದು ತೆಗೆಯುವ ಮೂಲಕ ಬಚಾವ್ ಆದೆ ಎಂದು ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಘಟನೆ ಬಳಿಕ ಜಾಂಗ್ ಮತ್ತು ಅವರ ಕಾರನ್ನು ಕ್ರೇನ್ ಸಹಾಯದಿಂದ ಹೊರ ತೆಗೆಯಲಾಯಿತು. ಅವಘಡದಲ್ಲಿ ಜಾಂಗ್ ಭುಜಕ್ಕೆ ನೋವಾಗಿದೆ ಹೊರತು ಯಾವುದೇ ಗಂಭೀರ ಸಮಸ್ಯೆ ಎದುರಾಗಿಲ್ಲ. (ಏಜೆನ್ಸೀಸ್)