ಹರಿಪ್ರಸಾದ್ ನಂದಳಿಕೆ ಕಾರ್ಕಳ
ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಇರುವ ರಸ್ತೆ ಬದಿಗಳಲ್ಲಿ ಪೊದೆಗಳು ಬೆಳೆದು ವಾಹನ ಸವಾರರು ಸಹಿತ ಪಾದಚಾರಿಗಳಿಗೂ ತೊಂದರೆಗಳಾಗುತ್ತಿವೆ. ಪೊದೆಗಳನ್ನು ತೆರವುಗೊಳಿಸಬೇಕಾದ ಸ್ಥಳೀಯಾಡಳಿತಗಳು ತಮಗೆ ಸಂಬಂಧವೇ ಇಲ್ಲದಂತಿವೆ.
ರಸ್ತೆಗಳ ಬದಿಗಳಲ್ಲಿ ದಪ್ಪ ಪೊದೆಗಳೇ ತುಂಬಿರುವುದರಿಂದ ವಾಹನಗಳು ಪರಸ್ಪರ ಸೈಡ್ ಕೊಡಲೂ ಆಗದೆ ಅಪಘಾತಗಳಿಗೆ ಒಳಗಾಗುತ್ತಿವೆ. ಅಪಘಾತಗಳಾದ ಸಂದರ್ಭ ವಾಹನ ಸವಾರರು ಪೊದೆಯೊಳಗೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಕಾರ್ಕಳದಿಂದ ಪಡುಬಿದ್ರಿಗೆ ಸಾಗುವ ರಾಜ್ಯ ಹೆದ್ದಾರಿ ಬದಿಯಲ್ಲೂ ಹುಲ್ಲಿನ ರಾಶಿ ಹೆಚ್ಚಾಗಿದ್ದು, ಸಮಸ್ಯೆಗಳಾಗುತ್ತಿವೆ. ಜಿ.ಪಂ ಹಾಗೂ ಲೋಕೊಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆ ಬದಿಗಳಲ್ಲೂ ಪೊದೆಗಳದ್ದೇ ದೊಡ್ಡ ಸಮಸ್ಯೆ.
ಗ್ರಾ.ಪಂ ವ್ಯಾಪ್ತಿಯಲ್ಲಿನ ರಸ್ತೆಗಳ ಇಕ್ಕೇಲಗಳಲ್ಲಿರುವ ಹುಲ್ಲು ಪೊದೆಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಸರಣಿ ಮನವಿ ಮಾಡಿಕೊಂಡರೂ ಪಂಚಾಯಿತಿಗಳಿಂದ ಪೂರಕ ಪ್ರತಿಕ್ರಿಯೆ ದೊರೆತಿಲ್ಲ.
ಎಲ್ಲೆಲ್ಲಿ ಹೆಚ್ಚು ಸಮಸ್ಯೆ?
ಬೆಳ್ಮಣ್ ಗ್ರಾ.ಪಂ ವ್ಯಾಪ್ತಿಯ ಕೆಲವೊಂದು ಒಳಭಾಗದ ರಸ್ತೆಗಳು ಹಾಗೂ ನಂದಳಿಕೆ ಗ್ರಾ ಪಂ. ಯ ಗೋಳಿಕಟ್ಟೆ, ನಂದಳಿಕೆ ದೇಗುಲ ರಸ್ತೆ ಹಾಗೂ ಬೋಳ ಗ್ರಾಮ ಪಂ ವ್ಯಾಪ್ತಿಯ ಕೆಲವೊಂದು ರಸ್ತೆ, ಪಳ್ಳಿ, ನಿಟ್ಟೆ, ಮುಂಡ್ಕೂರು, ಕಲ್ಯಾ ಸಹಿತ ತಾಲೂಕಿನ ಬಹುತೇಕ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಹುಲ್ಲು ಪೊದೆಗಳಿದ್ದು, ಅಪಘಾತಗಳು ಬಹುತೇಕ ಪೊದೆಗಳಿಂದಲೇ ಆಗುತ್ತಿವೆ.
ತಪ್ಪಿದ ಜೀವ ಹಾನಿ
ಪೊದೆಗಳೇ ತುಂಬಿರುವುದರಿಂದ ವಾಹನಗಳು ಪರಸ್ಪರ ಸೈಡ್ ನೀಡಲು ಆಗದೇ ರಸ್ತೆ ಮೇಲೆ ಅವಘಡಗಳಿಗೆ ತುತ್ತಾಗುತ್ತಿವೆ. ಇತ್ತೀಚೆಗೆ ನಂದಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಳಿಕಟ್ಟೆ ರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದಾಡಿಕೊಂಡು ಹೋಗುತ್ತಿದ್ದ ಸಂದರ್ಭ ಟಿಪ್ಪರೊಂದು ವೇಗವಾಗಿ ಬಂದಿದ್ದು, ರಸ್ತೆ ಬದಿಯಲ್ಲೇ ನಡೆಯುತ್ತಿದ್ದ ಮಹಿಳೆ ಮೇಲೆ ಹರಿಯುವ ಅಪಾಯ ಎದುರಾಗಿದ್ದು, ಮಹಿಳೆಯು ಪಕ್ಕದ ಪೊದೆಗೆ ಹಾರಿದ್ದರಿಂದ ಸ್ವಲ್ಪದಲ್ಲೇ ಪ್ರಾಣಹಾನಿ ತಪ್ಪಿದೆ.
ರಸ್ತೆಯ ಬದಿಯಲ್ಲಿ ದಟ್ಟವಾಗಿ ಬೆಳೆದ ಹುಲ್ಲು ಪೊದೆಗಳಿಂದ ವಾಹನ ಸವಾರರಿಂದ ಹಿಡಿದು ಪಾದಚಾರಿಗಳಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ಕೆಲವೊಂದು ಬಾರಿ ವಾಹನಗಳು ಓಡಾಡುವ ಸಂದರ್ಭ ರಸ್ತೆಯನ್ನು ಬಿಟ್ಟು ಕೆಳಗೆ ಇಳಿಯಲು ಜಾಗವಿಲ್ಲದೆ ಸಮಸ್ಯೆಯಾಗುತ್ತಿದೆ.
-ಸುರೇಶ್ ಕುಮಾರ್, ಗ್ರಾಮಸ್ಥ.
ಘನ ವಾಹನಗಳು ಓಡಾಡುವ ಸಂದರ್ಭ ರಸ್ತೆಯನ್ನು ಬಿಟ್ಟು ಕೆಳಗೆ ಇಳಿಯಲೇಬೇಕು. ಆದರೆ ಇಲ್ಲಿ ರಸ್ತೆ ಬಿಟ್ಟು ಇಳಿಯಲು ಹುಲ್ಲು ಪೊದೆಗಳಿಂದ ಸಮಸ್ಯೆಯಾಗುತ್ತಿದೆ. ಪ್ರಾಣಭಯದಲ್ಲೇ ರಸ್ತೆಯಲ್ಲಿ ಸಾಗುವುದು ಇಲ್ಲಿ ಅನಿವಾರ್ಯವಾಗಿದೆ.
ಶ್ರೀಲತಾ, ಪಾದಚಾರಿ.