Bus overturned ಶೈಕ್ಷಣಿಕ ಪ್ರವಾಸದ ಬಸ್‌ ಪಲ್ಟಿ 30 ವಿದ್ಯಾರ್ಥಿಗಳಿಗೆ ಗಾಯ

Bus overturned
Published on

ಹೊನ್ನಾವರ/Bus overturned: ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದ ವಿದ್ಯಾರ್ಥಿಗಳು ತುಂಬಿದ್ದ ಖಾಸಗಿ ಬಸ್ಸು ತಾಲೂಕಿನ ಆರೊಳ್ಳಿಯ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 30 ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕಿ ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ. ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿಯ ಕೆಪಿ ಸ್ಕೂಲ್ ವಿದ್ಯಾರ್ಥಿಗಳು ಕರಾವಳಿ ತೀರದ ಶೈಕ್ಷಣಿಕ ಪ್ರವಾಸ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡ ನಾಲ್ಕು ಜನ ವಿದ್ಯಾರ್ಥಿಗಳಾದ ಭವಾನಿ, ಅಭಿಷೇಕ, ಬೈರೇಗೌಡ, ಭವ್ಯಾ ಎನ್.ಕೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ 26 ವಿದ್ಯಾರ್ಥಿಗಳು ಹಾಗೂ ಶಿಕ್ಷಕಿ ರೇಣು ಸಿ.ಆರ್. ಹೊನ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲಾರ ಜಿಲ್ಲೆಯ ಮಾಲೂರಿನ ಮಾಸ್ತಿಯ ಕರ್ನಾಟಕ ಪಬ್ಲಿಕ್ ಸ್ಕೂಲಿನ ಒಟ್ಟೂ 94 ಜನ ವಿದ್ಯಾರ್ಥಿಗಳು ಎರಡು ಬಸ್ಸುಗಳಲ್ಲಿ ಮಂಗಳವಾರ ರಾತ್ರಿ ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೊರಟಿದ್ದರು. ಗೊಟಗೋಡಿ ರಾಕ್ ಗಾರ್ಡನ್, ಮುಂಡಗೋಡ, ಶಿರಸಿ, ಯಾಣ, ಗೋಕರ್ಣ ಪ್ರವಾಸ ಮುಗಿಸಿ ಎರಡು ಬಸ್ಸುಗಳು ಗುರುವಾರ ರಾತ್ರಿ ಗೋಕರ್ಣದಿಂದ ಕೋಲಾರಕ್ಕೆ ತೆರಳುತ್ತಿದ್ದರು.

Bus overturned

ಹೊನ್ನಾವರದಿಂದ 3 ಕಿ.ಮೀ. ದೂರದಲ್ಲಿರುವ ಆರೋಳ್ಳಿಯ ಅಪಾಯಕಾರಿ ತಿರುವಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಒಂದು ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. (Bus overturned) ಬಸ್ಸಿನಲ್ಲಿದ್ದ 47 ಜನರ ಪೈಕಿ 30 ಜನರು ಗಾಯಗೊಂಡಿದ್ದಾರೆ. ಸ್ಥಳಿಯರು ಹಾಗೂ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಪೊಲೀಸರ ಸಹಾಯದಿಂದ ಗಾಯಾಳುಗಳನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ಸೇರಿಸಲಾಯಿತು.

ಗಾಯಾಳುಗಳನ್ನು ಹೊರತು ಪಡಿಸಿ ಉಳಿದ ಎಲ್ಲ ವಿದ್ಯಾರ್ಥಿಗಳನ್ನು ಹೊನ್ನಾವರದ ಪ್ರಭಾತನಗರದ ಸಾಮರ್ಥ್ಯ ಸೌಧದಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಯಿತು. ಪ್ರಭಾತನಗರ ಶಾಲೆಯಲ್ಲಿ ಉಪಾಹಾರದ ವ್ಯಸ್ಥೆಯನ್ನು ಸ್ಥಳಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಲ್ಪಿಸಿಕೊಟ್ಟರು. ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಜಿ.ನಾಯ್ಕ, ಸತೀಶ ನಾಯ್ಕ ಆಸ್ಪತ್ರೆಗೆ ಮತ್ತು ವಿದ್ಯಾರ್ಥಿಗಳು ಉಳಿದುಕೊಂಡಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net