ಗ್ರಾಹಕರಿಗೆ ಜಾಹೀರಾತಿನಲ್ಲಿ ತೋರಿಸೋದು ಬೇರೆ.. ಕೊಡೋದು ಬೇರೆ..ಬರ್ಗರ್ ಕಿಂಗ್ ಕಂಪನಿ ವಿರುದ್ಧ ಕೋರ್ಟ್​​​ನಲ್ಲಿ ಕೇಸ್

burger king
Published on

ನವದೆಹಲಿ: ಬರ್ಗರ್‌, ಸ್ಯಾಂಡ್‌ವಿಚ್, ಪಿಜ್ಜಾಗಳು, ಚಿಕನ್ ರೋಲ್‌ಗಳು ಮತ್ತು ಫಾಸ್ಟ್ ಫುಡ್‌ಗಳಂತಹ ಜಂಕ್ ಆಹಾರಗಳು ಇತ್ತೀಚಿನ ದಿನಗಳಲ್ಲಿ ಜಗತ್ತನ್ನು ಆಳುತ್ತಿವೆ. ಚಿಕ್ಕವರಿಂದ ಹಿಡಿದು ಮುದುಕರವರೆಗೆ ಎಲ್ಲರೂ ಇವುಗಳನ್ನು ತಿನ್ನುತ್ತಿದ್ದಾರೆ. ಆದರೆ ಈ ಕಂಪನಿಯ ವಿರುದ್ಧವೇ ಕೆಲವು ಗ್ರಾಹಕರು ಸರಿಯಾದ ಪ್ರಮಾಣದಲ್ಲಿ ಆಹಾರ ನೀಡುತ್ತಿಲ್ಲ ಎಂದು ಕೋರ್ಟ್​​ನಲ್ಲಿ ಕೇಸ್​​ ಹಾಕಿದ್ದಾರೆ.

ಜಾಹೀರಾತುಗಳಲ್ಲಿ ಶೇ.35 ರಷ್ಟು ಹೆಚ್ಚು ಕೋಳಿ ಮತ್ತು ತರಕಾರಿ ಇದೆ ಎಂದು ತೋರಿಸಿ ಬಳಕೆದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಜಾಹೀರಾತು ಒಂದನ್ನು ತೋರಿಸಿ, ಪ್ರಮಾಣ ಸರಿಯಾಗಿ ನೀಡದೆ ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎಂದು ಹಲವು ಗ್ರಾಹಕರು ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಫಾಸ್ಟ್ ಫುಡ್ ದೈತ್ಯ ತನ್ನ ಬರ್ಗರ್‌ಗಳ ಗಾತ್ರವನ್ನು ಜಾಹೀರಾತುಗಳಲ್ಲಿ ಮಾತ್ರ ಹೀಗೆ ತೋರಿಸುತ್ತಿದೆ. ಆದರೆ ಮೆನು-ಐಟಂಗಳನ್ನು ಅಕ್ಕಪಕ್ಕದಲ್ಲಿ ನೋಡಿದರೆ ಸಾಕಷ್ಟು ವ್ಯತ್ಯಾಸ ಕಾಣುತ್ತಿದೆ. ಗ್ರಾಹಕರಿಗೆ ಸರಿಯಾದ ಪ್ರಮಾಣದಲ್ಲಿ ನೀಡುತ್ತಿಲ್ಲ ಎಂಬ ಆರೋಪವಿದೆ ಎಂದು ನ್ಯಾಯಾಲಯದಲ್ಲಿ ಉಲ್ಲೇಖಿಸಲಾಗಿದೆ.

ಫಾಸ್ಟ್ ಫುಡ್ ದೈತ್ಯ ತನ್ನ ಬರ್ಗರ್ ಅನ್ನು "ನಿಖರವಾಗಿ ಚಿತ್ರದಂತೆಯೇ" ಕಾಣುವಂತೆ ಮಾಡುವ ಅಗತ್ಯವಿಲ್ಲ. ಬರ್ಗರ್ ಕಿಂಗ್ ಗ್ರಾಹಕರ ಮೊಕದ್ದಮೆ ಸಾಮಾನ್ಯವಾಗಿದೆ ಇದನ್ನು ವಜಾಗೊಳಿಸಬೇಕು ಎಂದು ನ್ಯಾಯಾಲಯದಲ್ಲಿ ವಾದಿಸಿತು. ಆದರೆ ನ್ಯಾಯಾಲಯವು  ಬರ್ಗರ್ ಕಿಂಗ್ ಕಂಪನಿಯ ಈ ವಾದಗಳನ್ನು ತಿರಸ್ಕರಿಸಿತು.

ಈ ವಿಚಾರವಾಗಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​​, ಗ್ರಾಹಕರಿಗೆ ವಂಚನೆಯಾಗುತ್ತಿದ್ದು, ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರ್ಟ್​ ತೀರ್ಪು ನೀಡಿದೆ. ಇದರಿಂದ ಅರ್ಜಿದಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಸಿದ್ಧ ಫಾಸ್ಟ್ ಫುಡ್ ಕಂಪನಿ ಬರ್ಗರ್ ಕಿಂಗ್ ವಿರುದ್ಧ ಈ ಹಿಂದೆ ಹಲವು ದೂರುಗಳು ಬಂದಿದ್ದವು. ಜಾಹೀರಾತುಗಳಲ್ಲಿ ತೋರಿಸುವ ಪ್ರಮಾಣಕ್ಕೂ, ಗ್ರಾಹಕರಿಗೆ ಕೊಟ್ಟ ಪ್ರಮಾಣ ಕಡಿಮೆ ಎಂದು ಬರ್ಗರ್ ಕಿಂಗ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆದರೆ ಬರ್ಗರ್ ಕಿಂಗ್ ಈ ದೂರುಗಳನ್ನು ನಿರ್ಲಕ್ಷಿಸಿತ್ತು.

ಬರ್ಗರ್ ಕಿಂಗ್ 1953 ರಲ್ಲಿ ಫ್ಲೋರಿಡಾದ ಜಾಕ್ಸನ್‌ವಿಲ್ಲೆಯಲ್ಲಿ ಬರ್ಗರ್ ಕಂಪನಿ ಪ್ರಾರಂಭವಾಯಿತು. ಅದರ ನಂತರ ಅದು ಅಂತರರಾಷ್ಟ್ರೀಯ ಬ್ರಾಂಡ್ ಆಗಿ ವಿಸ್ತರಿಸಿತು. ಪ್ರಸ್ತುತ, ಬರ್ಗರ್ ಕಿಂಗ್ ಅನೇಕ ದೇಶಗಳಲ್ಲಿ ಪ್ರಮುಖ ಜಂಕ್ ಫುಡ್ ಕಂಪನಿಗಳಲ್ಲಿ ಒಂದಾಗಿ ಬೆಳೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net