

ಶ್ರೀರಂಗಪಟ್ಟಣ: ಹನುಮ ಜಯಂತಿ ಅಂಗವಾಗಿ ಕೇಸರಿಸುತ ಗೆಳೆಯರ ಬಳಗದಿಂದ ತಾಲೂಕಿನ ವಡಿಯಾಂಡಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಎರಡು ದಿನದ ರಾಜ್ಯಮಟ್ಟದ ಚಕ್ಕಡಿಗಾಡಿ ಓಟದ ಸ್ಪರ್ಧೆ ಮುಕ್ತಾಯಗೊಂಡಿತು.
ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಶೀರ್ಷಿಕೆಯಡಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧೆಡೆಯಿಂದ 80ಕ್ಕೂ ಹೆಚ್ಚು ಜೋಡಿ ರಾಸುಗಳು ಹಾಗೂ ಅದರ ಮಾಲೀಕರು ಪಾಲ್ಗೊಂಡಿದ್ದರು. ಎರಡು ಹಲ್ಲು ಹಾಗೂ ಹಾಲು ಹಲ್ಲಿನ ಚಕ್ಕಡಿ ಗಾಡಿ ಸ್ಪರ್ಧೆ ವೇಳೆ ನೆರೆದಿದ್ದವರಿಗೆ ಪ್ರತಿ ಕ್ಷಣವೂ ಮೈನವಿರೇಳುವಂತೆ ಮಾಡಿತು. ಅಂತೆಯೇ ಚಪ್ಪಾಳೆ, ಶಿಳ್ಳೆ ಹಾಕುವ ಮೂಲಕ ಜನರು ಸ್ಪರ್ಧಿಗಳನ್ನು ಹುರಿದುಂಬಿಸಿದರು. ಇಡೀ ಸ್ಪರ್ಧೆ ಸಕತ್ ಮನರಂಜನೆ ನೀಡಿತು.
ಅದ್ದೂರಿ ಪ್ರದರ್ಶನದೊಂದಿಗೆ ಪ್ರಥಮ ಬಹುಮಾನವನ್ನು ಚಿಕ್ಕಮಗಳೂರು ಜಿಲ್ಲೆ ತರಿಕೆರೆ ಗ್ರಾಮದ ರಾಸುಗಳು ಪಡೆದುಕೊಂಡವು. ಇವುಗಳ ಮಾಲೀಕರಿಗೆ ಹೀರೋ ಬೈಕ್ ಹಾಗೂ ಆಕರ್ಷಕ ಟ್ರೋಪಿ ನೀಡಲಾಯಿತು. ಎರಡನೇ ಬಹುಮಾನವನ್ನು ಶ್ರೀರಂಗಪಟ್ಟಣ ತಾಲೂಕು ಗೊಬ್ಬರಗಾಲ ಗ್ರಾಮದ ರಾಸುಗಳು ಪಡೆದುಕೊಂಡಿದ್ದು, 30 ಸಾವಿರ ರೂ ನಗದು ಗೆದ್ದುಕೊಂಡವು. ಶ್ರೀರಂಗಪಟ್ಟಣ ತಾಲೂಕು ಪೀಹಳ್ಳಿಯ ರಾಸುಗಳು ಮೂರನೇ ಬಹುಮಾನದೊಂದಿಗೆ 20 ಸಾವಿರ ರೂ ನಗದು, ಶ್ರೀರಂಗಪಟ್ಟಣ ತಾಲೂಕು ದೊಡ್ಡಪಾಳ್ಯದ ರಾಸು ನಾಲ್ಕನೇ ಬಹುಮಾನದೊಂದಿಗೆ 10 ಸಾವಿರ ರೂ ನಗದು ಹಾಗೂ ವಡಿಯಾಂಡಹಳ್ಳಿ ಗ್ರಾಮದ ರಾಸುಗಳಿಗೆ ಐದನೇ ಬಹುಮಾನವಾಗಿ 5 ಸಾವಿರ ರೂ ನಗದು ನೀಡಲಾಯಿತು. ಎಲ್ಲರಿಗೂ ಟ್ರೋಪಿ ಕೊಡಲಾಯಿತು.
ತೀರ್ಪುಗಾರರಾದ ನಿತಿನ್ ಬಾಬುರಾಯನಕೊಪ್ಪಲು, ಕಿರಣ್ ಸಾಲಿಗ್ರಾಮ, ಬಳಗದ ಕಿರಣ್ ಮರೀಗೌಡ, ಹರ್ಷ ಜಕ್ಕನಹಳ್ಳಿ, ಎಂಟಿಎನ್ ಕುಮಾರ್, ಪವನ್ ಪಿಡ್ಡೆ, ನಾಗರಾಜು, ಸಂಜು, ಸುನೀಲ್, ದಿನೇಶ್, ಅವಿನಾಶ್, ಉದಯ್ ಇದ್ದರು.