

Stock Market: ಭಾರತ ಮತ್ತು ಅಮೆರಿಕಾದ ನಡುವೆ ಉದ್ವಿಗ್ನತೆ ಕಡಿಮೆಯಾಗುತ್ತಿರುವ ಹಿನ್ನೆಲೆ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರದ 3ನೇ ದಿನವಾದ ಬುಧವಾರ (ಸೆ.10) ಏರಿಕೆ ಕಂಡು ಆರೋಗ್ಯಕರ ವಹಿವಾಟು ನಡೆಸಿದೆ. ಷೇರುಪೇಟೆಯಲ್ಲಿ ಗೂಳಿ ಓಟ ಭರ್ಜರಿಯಾಗಿದೆ.
ವಹಿವಾಟಿನ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 323 ಪಾಯಿಂಟ್ನೊಂದಿಗೆ 0.40 ಪ್ರತಿಶತ ಏರಿಕೆಯಾಗಿ 81,425.15 ಕ್ಕೆ ತಲುಪಿತ್ತು ಮತ್ತು ನಿಫ್ಟಿ 104.5 ಪಾಯಿಂಟ್ನೊಂದಿಗೆ 0.42 ಪ್ರತಿಶತ ಏರಿಕೆಯಾಗಿ 24,973.10ಕ್ಕೆ ಸ್ಥಿರಗೊಂಡಿದೆ. ಸುಮಾರು 2165 ಷೇರುಗಳು ಮುನ್ನಡೆ ಸಾಧಿಸಿದ್ದು, 1555 ಷೇರುಗಳು ಕುಸಿದಿವೆ. ಅಲ್ಲದೆ 121 ಷೇರುಗಳು ಬದಲಾಗದೆ ಉಳಿದಿವೆ.
ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ವಿಭಾಗಗಳು ಉತ್ತಮ ಪ್ರದರ್ಶನ ನೀಡಿವೆ. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇ. 0.84 ರಷ್ಟು ಏರಿಕೆ ಕಂಡರೆ, ಸ್ಮಾಲ್ಕ್ಯಾಪ್ ಸೂಚ್ಯಂಕವು ಶೇ. 0.72 ರಷ್ಟು ಏರಿಕೆ ಕಂಡಿದೆ.
ಭಾರತದೊಂದಿಗೆ ಸುಂಕ ಮಾತುಕತೆ ಪುನರಾರಂಭಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ.ಅಲ್ಲದೆ, ಭಾರತ-ಅಮೆರಿಕ ಸಂಬಂಧಗಳನ್ನು ಸುಧಾರಿಸಲು ಅಧ್ಯಕ್ಷ ಟ್ರಂಪ್ ಅವರ ಉಪಕ್ರಮ ಮತ್ತು ಅದಕ್ಕೆ ಪ್ರಧಾನಿ ಮೋದಿಯವರ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಇಂದಿನ ಮಾರುಕಟ್ಟೆಗೆ ಪ್ರಮುಖ ಧನಾತ್ಮಕ ಅಂಶವಾಗಿದೆ ಎಂದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.(ಏಜೆನ್ಸೀಸ್)