Bull Love: ಸಂಗಾತಿಯನ್ನು ಬಿಟ್ಟಿರಲಾರದೆ ಟೆಂಪೋ ಹಿಂದೆ ಓಡಿದ ಗೂಳಿ! ಮೂಗಜೀವಿಗಳ ಪ್ರೀತಿಗೆ ನೆಟ್ಟಿಗರು ಫಿದಾ..ಮುಂದೇನಾಯ್ತು?

cow-bull
Published on

ಚೆನ್ನೈ: ಪ್ರೀತಿ, ಪ್ರೇಮ ಮನುಷ್ಯರಲ್ಲಷ್ಟೇ ಅಲ್ಲ, ಮೂಗಜೀವಿಗಳಲ್ಲೂ ಬೆಸೆದುಕೊಂಡಿರುತ್ತದೆ. ಅವುಗಳದ್ದು ಕಲ್ಮಶವಿಲ್ಲದ ಪ್ರೀತಿ. ಇದಕ್ಕೆ ಉದಾಹರಣೆಯೊಂದು ಇತ್ತೀಚೆಗೆ ನಡೆದಿದೆ. ಇದು ಹಸು ಮತ್ತು ಗೂಳಿ ನಡುವಿನ ಬಂಧ(Bull Love). ಇದರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೋಡಿದ್ರೆ ನೀವೂ ಭಾವುಕರಾಗುತ್ತೀರಿ. ಹಸುವನ್ನು ಟೆಂಪೋದಲ್ಲಿ ತೆಗೆದುಕೊಂಡು ಹೋಗುವುದನ್ನು ನೋಡಿದ ಗೂಳಿ ತೋರುತ್ತಿರುವ ಹಂಬಲವನ್ನು ನೋಡಿದರೆ ನಿಜವಾದ ಪ್ರೀತಿ ಏನೆಂದು ಅರ್ಥವಾಗುತ್ತದೆ. ಅಷ್ಟೇ ಅಲ್ಲ, ಕರುಳು ಕಿತ್ತು ಬರುವಂತಿದೆ. ವಿಡಿಯೋ ನೋಡಿದ ಜನ ಭಾವುಕರಾಗುತ್ತಿದ್ದಾರೆ.

ಈ ವೀಡಿಯೊವನ್ನು ಇನ್​ಸ್ಟಾಗ್ರಾಮ್ ಬಳಕೆದಾರರಾದ ಜಿಂದಗಿ.ಗುಲ್ಜಾರ್​ ಹಂಚಿಕೊಂಡಿದ್ದಾರೆ. ವಿಡಿಯೋ ತಮಿಳುನಾಡಿನಲ್ಲಿ ಸೆರೆಹಿಡಿಯಲಾಗಿದೆ. ಅದರಲ್ಲಿ ಗೂಳಿ ಟೆಂಪೋ ಹಿಂದೆ ಓಡುತ್ತಿದೆ. ಆ ವ್ಯಾನಿನಲ್ಲಿ ಒಂದು ಹಸು ಇದೆ.

ವಿವರಕ್ಕೆ ಹೋದರೆ, ಮಾಲೀಕರು ಹಸುವನ್ನು ಇನ್ನೊಬ್ಬರಿಗೆ ಮಾರಾಟ ಮಾಡಿದ್ದಾರೆ. ಆ ವ್ಯಕ್ತಿ ಹಸುವನ್ನು ಟೆಂಪೋದಲ್ಲಿ ಕಟ್ಟಿ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಹಸುವಿನ ನಿರ್ಗಮನವನ್ನು ಗೂಳಿಗೆ ಸಹಿಸಲಾಗಿಲ್ಲ. ಟೆಂಪೋವನ್ನು ಹಿಂಬಾಲಿಸಿದೆ. ಗೂಳಿ ಓಡೋಡಿ ಬರುತ್ತಿರುವುದನ್ನು ಕಂಡ ಚಾಲಕ ಟೆಂಪೋ ನಿಲ್ಲಿಸಿದ್ದಾನೆ. ಆಗ ಗೂಳಿ ಚಾಲಕನ ಬಳಿ ಹೋಗಿ ಥ್ಯಾಂಕ್ಸ್​ ಹೇಳಿದಂತೆ ವರ್ತಿಸಿದೆ.

ಸ್ವಲ್ಪ ಸಮಯದ ನಂತರ ಟೆಂಪೋ ಚಾಲಕ ಬಾಗಿಲು ತೆಗೆದು ಕೆಳಗಿಳಿದಿದ್ದಾನೆ. ಆಗ ಗೂಳಿಯು ಟೆಂಪೋ ಮೇಲಿದ್ದ ಹಸುವಿನ ಕಡೆ ಹೋಗಿ ಪ್ರೀತಿಯಿಂದ ನೋಡಿದೆ. ಹಸು ಸಹ ಗೂಳಿಕಡೆ ನೋಡಿ ಅಸಹಾಯಕತೆ ತೋರಿದೆ. ಆಗ ರಸ್ತೆಯಲ್ಲಿ ಹೋಗುತ್ತಿದ್ದವರು ಈ ದೃಶ್ಯವನ್ನು ನೋಡಿ ದಂಗಾಗಿ ಹೋಗಿದ್ದಾರೆ.

ಬಳಿಕ ಅಲ್ಲಿಗೆ ಜನ ಸೇರಿದ್ದಾರೆ. ಟೆಂಪೋದಲ್ಲಿದ್ದ ಹಸುಕೊಂಡ ವ್ಯಕ್ತಿಗೆ ತಿಳಿಹೇಳಿದ್ದಾರೆ. ಬಳಿಕ ಅಲ್ಲೇ ಹಸು ಮತ್ತು ಗೂಳಿಗೆ ಪೂಜೆ ಮಾಡಿ ಹಸು ಮಾಲೀಕನನ್ನು ಕರೆಸಿ ಕೊಟ್ಟಿಗೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಇದನ್ನು 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸುಮಾರು 40 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ನೆಟಿಜನ್‌ಗಳು ``ಇದು ಶುದ್ಧ ಪ್ರೀತಿ'' ಮತ್ತು `ಆ ಗೂಳಿ ತನ್ನ ಗೆಳತಿಯನ್ನು ಬಿಡಿಸಲು ಸಾಕಷ್ಟು ಪ್ರಯತ್ನಿಸಿದೆ'' 'ಪ್ರಾಣಿಗಳೇ ಗುಣದಲ್ಲಿ ಮೇಲು' ಎಂದು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net