ಸರಳತೆಯಿಂದ ಸಮಗ್ರ ವ್ಯಕ್ತಿತ್ವ ನಿರ್ಮಾಣ

Bdk_simplicity
Published on

ಮಂಜೇಶ್ವರ: ಸರಳತೆ, ಸಜ್ಜನಿಕೆಯನ್ನೊಳಗೊಂಡು ಸಮಾಜಮುಖಿಯಾಗಿ ಜೀವನ ಸಾಗಿಸಿದರೆ ಸಮಗ್ರ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ನಾವು ಬದುಕುವುದರೊಂದಿಗೆ ಪರರಿಗೆ ಅವಕಾಶ ನೀಡುವುದೇ ಜೀವನದ ಸಾರ್ಥಕತೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಸಾದ್ವಿ ಶ್ರೀ ಮಾತಾನಂದಮಂಯೀ ಆಶಿರ್ವಚನ ನೀಡಿದರು.

ಮಂಜೇಶ್ವರ ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಬುಧವಾರ ರಾತ್ರಿ ನಡೆದ ಮಾತೆಯರ ಸಮಾವೇಶ ಮಾತೃ ಸಂಗಮ ಉದ್ಘಾಟಿಸಿ ಮಾತನಾಡಿದರು.

ಶ್ರೀ ಕೀರ್ತೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ರೇವತಿ ಶೈಲೇಶ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲೆ ಡಾ.ಕೆ.ವಿ.ಮಾಲಿನಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ, ರಾ.ಮಹಿಳಾ ಮೋರ್ಚಾ ಸದಸ್ಯೆ ಅಶ್ವಿನಿ ಎಂ.ಎಲ್., ಪ್ರಾಧ್ಯಾಪಕಿ ಪ್ರೊ.ಸುಜಾತಾ, ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ, ಕೃಷ್ಣವೇಣಿ, ರೇಖಾ ಪ್ರೇಮ್ ದಾಸ್, ಸುಪ್ರಿಯಾ ಶೆಣೈ ಶುಭಾಶಂಸನೆಗೈದರು. ಕ್ಷೇತ್ರದ ಮಹಿಳಾ ಸಂಘ ಸದಸ್ಯೆ ತೃಪ್ತಿ ಸ್ವಾಗತಿಸಿದರು. ಅನುಷಾ ಶರತ್ ನಿರೂಪಿಸಿದರು. ಮಹಿಳಾ ಸಂಘ ಸದಸ್ಯೆ ಸ್ನೇಹ ನವೀನ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ಕೀರ್ತೇಶ್ವರ ಮಹಿಳಾ ಮಂಡಳಿಯವರಿಂದ ನೃತ್ಯ ಸಂಗಮ, ನಾಟ್ಯ ಮಯೂರ ಡಾ.ಶ್ರೀಕಾಂತ್ ಕೊಂಡಾಣ ನೇತೃತ್ವದ ನಾಲ್ವಡಿ ಕೃಷ್ಣರಾಜ ಒಡೆಯರು ಪ್ರಶಸ್ತಿ ವಿಜೇತ ತಂಡ ಬೇರಿಕೆ ರಕ್ತಶ್ವರಿ ಕಟ್ಟೆ ಯಶಸ್ವಿ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯ ವೈಭವ ನಡೆಯಿತು. ವೈದಿಕದಂಗವಾಗಿ ಬೆಳಗ್ಗೆ ಅಂಕುರ ಪೂಜೆ, 108 ಕಾಯಿ ಮಹಾಗಣಪತಿ ಹೋಮ, ತ್ರಿಕಾಲ ಪೂಜೆ, ಪವಮಾನ ಹೋಮ, ಶತರುದ್ರಾಭಿಷೇಕ, ಮಹಾರುದ್ರಯಾಗ, ಮಹಾಪೂಜೆ, ಅನ್ನಸಂತರ್ಪಣೆ, ಕೀರ್ತೇಶ್ವರ ಮಹಿಳಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಸಂಜೆ ಶೂಲಿನಿ ಹೋಮ, ಮಹಾಬಲಿ ಪೀಠ ಪ್ರತಿಷ್ಠಾಪನೆ, ನಾಗದೇವರ ಬನದಲ್ಲಿ ವಾಸ್ತು ಪೂಜೆ, ಕಲಶಾಧಿವಾಸ ಅಧಿವಾಸ ಹೋಮ, ಅಂಕುರ ಪೂಜೆ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net