

ಸಂದೀಪ್ ಸಾಲ್ಯಾನ್ ಬಂಟ್ವಾಳ
ವಲಯ 15ರ ಪ್ರತಿಷ್ಠಿತ ಘಟಕವಾಗಿರುವ ಜೆಸಿಐ ಬಂಟ್ವಾಳ ವ್ಯವಸ್ಥಿತ ಸೂರಿಲ್ಲದೆ ಕಂಗೆಟ್ಟಿದ್ದ ವಯೋವೃದ್ಧ ಮಹಿಳೆಗೆ ಸೂರು ನಿರ್ಮಿಸಿ ಮಾದರಿಯಾಗಿದೆ.
ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಪಲ್ಲಮಜಲು ಗೋಳಿನೆಲ ಎಂಬಲ್ಲಿ 85 ವರ್ಷದ ಕಮಲಜ್ಜಿ ಸರಿಯಾದ ಸೂರಿಲ್ಲದೆ ಹಲವು ಸಮಯಗಳಿಂದ ಮುರುಕಲು ಜೋಪಡಿಯಲ್ಲಿ ವಾಸವಾಗಿದ್ದರು. ಮಳೆಗಾಲದಲ್ಲಿ ನೀರೆಲ್ಲಾ ಜೋಪಡಿಯೊಳಗೆ ತುಂಬಿ ಆತಂಕದಲ್ಲೇ ದಿನ ಕಳೆಯುತ್ತಿದ್ದರು. ಇದರಿಂದಾಗಿ ಸ್ಥಳೀಯ ಮನೆಯೊಂದರಲ್ಲಿ ರಾತ್ರಿ ಕಳೆಯುವ ಅನಿವಾರ್ಯ ಸ್ಥಿತಿ ಅವರಿಗೆ ಒದಗಿತ್ತು.
ಇತ್ತೀಚೆಗೆ ಕಾರ್ಮೆಲ್ ಪದವಿ ಕಾಲೇಜಿನಲ್ಲಿ ಜೆಸಿಐ ಬಂಟ್ವಾಳ ವಿಶ್ವ ಮಹಿಳಾ ದಿನ ಆಚರಿಸಿದ್ದ ಸಂದರ್ಭ ಅಲ್ಲಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಕಮಲಜ್ಜಿಗೊಂದು ಸೂರು ನಿರ್ಮಿಸಿಕೊಡುವಂತೆ ವಿನಂತಿಸಿಕೊಂಡಿದ್ದರು. ಆ ದಿನವೇ ಮನೆಯನ್ನು ಪರಿಶೀಲಿಸಿ ಅವರಿಗೆ ವಾಸಕ್ಕೆ ಯೋಗ್ಯವಾಗುವ ಸಣ್ಣ ಕುಟೀರ ನಿರ್ಮಿಸಿ ಕೊಡುವ ಬಗ್ಗೆ ಜೆಸಿಐ ಬಂಟ್ವಾಳ ಯೋಜನೆ ರೂಪಿಸಿತ್ತು. ಕಳೆದ ಬುಧವಾರ ಭಾರಿ ಗಾಳಿ-ಮಳೆ ಸುರಿದಾಗ ಕಮಲಜ್ಜಿ ತೊಂದರೆಗೊಳಗಾಗಿದ್ದರು. ಇದರಿಂದಾಗಿ ಶೀಘ್ರ ಸೂರು ನಿರ್ಮಿಸುವ ಕಾರ್ಯಕ್ಕೆ ಮುಂದಾದ ಜೆಸಿಐ ಬಂಟ್ವಾಳದ ಸದಸ್ಯರು ಹಾಗೂ ಕಾರ್ಮೆಲ್ ವಿದ್ಯಾಸಂಸ್ಥೆಯ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಹಳೇ ಗುಡಿಸಲು ತೆರವುಗೊಳಿಸಿದರು.
ಜೆಸಿಐ ಬಂಟ್ವಾಳದ ಸದಸ್ಯರ ಪ್ರಯತ್ನದ ಫಲವಾಗಿ ಒಂದು ವಾರದಲ್ಲಿ ಕಮಲಜ್ಜಿಯ ವಾಸಕ್ಕೆ ಯೋಗ್ಯ ಕುಟೀರ ನಿರ್ಮಾಣಗೊಳ್ಳುತ್ತಿದೆ. ಜೆಸಿಐ ಬಂಟ್ವಾಳದ ಅಧ್ಯಕ್ಷ ಗಣೇಶ್ ಕುಲಾಲ್, ಪೂರ್ವಾಧ್ಯಕ್ಷರಾದ ಸದಾನಂದ ಬಂಗೇರ, ರಾಜೇಂದ್ರ ಕೆ, ಕಾರ್ಯದರ್ಶಿ ಕಿಶೋರ್ ಆಚಾರ್ಯ, ಕಾರ್ಮೆಲ್ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಲತಾ ಫರ್ನಾಂಡಿಸ್, ಉಪನ್ಯಾಸಕಿ ವಿಜೇತ ಕುಲಾಲ್, ಸಿಬ್ಬಂದಿ ಸುನೀತಾ ಡಿಸೋಜ ಹಾಗೂ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜೆಸಿಐ ಬಂಟ್ವಾಳದ ಸದಸ್ಯರೊಂದಿಗೆ ಮೊಡಂಕಾಪು ಕಾರ್ಮೆಲ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಕೈ ಜೋಡಿಸಿ ಶ್ರಮದಾನ ನಡೆಸಿದ್ದಾರೆ.