

ವಿಜಯವಾಣಿ ಸುದ್ದಿಜಾಲ ಬೈಂದೂರು
ಬೈಂದೂರು ತಾಲೂಕು ಕಚೇರಿ ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಭೆ, ಸಮಾರಂಭ, ತರಬೇತಿ ಸಹಿತಿ ಪ್ರಮುಖ ಕಾರ್ಯಕ್ರಮ ಆಯೋಜಿಸಲು ಸ್ಥಳಾವಕಾಶದ ಕೊರತೆಯಿದೆ. ಶೀಘ್ರವೇ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಬೈಂದೂರು ತಾಲೂಕು ಪಂಚಾಯಿತಿಯ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸ್ವೀಕಾರವಾಗಿದ್ದು, ಲಭ್ಯ ಅನುದಾನ ಪರಿಗಣಿಸಿ ನಿರ್ಧರಿಸಲಾಗುವುದು. 61 ಹೊಸ ತಾಲೂಕು ಪಂಚಾಯಿತಿಗಳ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲು ಬಾಕಿ ಇದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ವಾಟರ್ಮನ್, ಶುಚಿತ್ವ ನೌಕರರು, ಅಟೆಂಡರ್ಗಳ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ, ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ಭದ್ರತೆ, ಉತ್ತಮ ವೇತನ ಸೌಲಭ್ಯ ಒದಗಿಸುವಂತೆ ಶಾಸಕ ಗುರುರಾಜ್ ಗಂಟಿಹೊಳೆ ಸರ್ಕಾರವನ್ನು ಆಗ್ರಹಿಸಿದರು.
ಶಾಸಕರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವರು ಉತ್ತರಿಸಿ, ಪ್ರಸ್ತುತ ಸೇವೆಯಿಂದ ನಿವೃತ್ತಿಯಾಗುವ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಅಥವಾ ಸೇವೆಯಲ್ಲಿದ್ದಾಗ ಮೃತಪಟ್ಟ ಸಿಬ್ಬಂದಿಯ ಅವಲಂಬಿತರಿಗೆ ನಿವೃತ್ತಿ ಹಾಗೂ ಮರಣೋತ್ತರ ಉಪದಾನ ನೀಡಲಾಗುತ್ತಿದೆ. ಸಿಬ್ಬಂದಿ ವರ್ಗದವರಿಗೆ ಅನಿರೀಕ್ಷಿತ ಸಂದರ್ಭ ಅಪಘಾತಗಳಾದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಪ್ರಧಾನ ಮಂತ್ರಿಯವರ ಜನಧನ್ ಯೋಜನೆಯಡಿ ಮೂರು ಪ್ರಮುಖ ವಿಮಾ ಸೌಲಭ್ಯ ಒದಗಿಸಲು ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ನೌಕರರಿಗೆ ಹೃದ್ರೋಗ ಶಸ್ತ್ರಚಿಕಿತ್ಸೆ, ಕ್ಯಾನ್ಸರ್, ಬೊನ್ ಮ್ಯಾರೋ ಟ್ರಾನ್ಸ್ಪ್ಲಾಂಟ್, ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಾಯಿಲೆಗಳಿಗೆ ತುತ್ತಾದಲ್ಲಿ ವೈದ್ಯಕೀಯ ವೆಚ್ಚ ಗರಿಷ್ಠ 50,000 ರೂ. ಏಕಕಾಲದಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ. ಪಂಚಾಯಿತಿ ಸಿಬ್ಬಂದಿಗೆ ಸೇವಾ ಹಿರಿತನದ ವೇತನ ನಿಗದಿಪಡಿಸುವಿಕೆ ಮತ್ತು ವೇತನ ಹೆಚ್ಚಳದ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.