

ನವದೆಹಲಿ: ಜನವರಿ 31 ರಿಂದ ಫೆಬ್ರವರಿ 9 ರವರೆಗೆ ನಡೆಯಲಿರುವ ಬಜೆಟ್ ಅಧಿವೇಶನಕ್ಕೆ ಸಂಸತ್ತು ಸಜ್ಜಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆರಂಭಿಕ ದಿನದಂದು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಅಧಿವೇಶನದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಲಾಗುವುದಿಲ್ಲ. ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಗಳ ನಡೆಯಲಿರುವುದರಿಂದ ಅಲ್ಲಿಯವರೆಗಿನ ಅವಧಿಯ ಮಧ್ಯಂತರ ಬಜೆಟ್ ಇದಾಗಿರುತ್ತದೆ. ಹೀಗಾಗಿ, ಯಾವುದೇ ಪ್ರಮುಖ ನಿರ್ಣಯಗಳು ಈ ಬಜೆಟ್ನಲ್ಲಿ ಇರುವ ಸಾಧ್ಯತೆ ಕಡಿಮೆ. ಆದರೂ ಒಂದು ಸಂಭಾವ್ಯ ಪ್ರಮುಖ ನಿರ್ಧಾರವೆಂದರೆ, ಮಹಿಳಾ ರೈತರಿಗೆ ನೀಡಲಾಗುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ದುಪ್ಪಟ್ಟು ಮಾಡಬಹುದಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಈಗ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿ ಹಣ ನೀಡಲಾಗುತ್ತಿದೆ. ಭೂಮಾಲೀಕ ಮಹಿಳಾ ರೈತರಿಗೆ ಈ ವಾರ್ಷಿಕ ಪಾವತಿಯನ್ನು 12,000 ರೂ.ಗೆ ದುಪ್ಪಟ್ಟು ಮಾಡುವುದನ್ನು ಸರ್ಕಾರ ಪರಿಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಯನ್ನು ಫೆಬ್ರವರಿ 1 ರಂದು ಬಜೆಟ್ನಲ್ಲಿ ಘೋಷಿಸುವ ಸಾಧ್ಯತೆಯಿದೆ. ಇದಕ್ಕಾಗಿ ಸರ್ಕಾರಕ್ಕೆ ಹೆಚ್ಚುವರಿಯಾಗಿ 12,000 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿ ಈ ಯೋಜನೆಯನ್ನು ಘೋಷಿಸಿದರೆ, ಮುಂಬರುವ ಲೋಕಸಭೆ ಚುನಾವಣೆ 2024 ಕ್ಕೆ ಮುಂಚಿತವಾಗಿ ಮಹಿಳಾ ಕೃಷಿ ಕಾರ್ಮಿಕರನ್ನು ಸಬಲೀಕರಣಗೊಳಿಸುವ ಒಂದು ಪ್ರಮುಖ ಕ್ರಮವಾಗಲಿದೆ.
ಇತರ ವಿಷಯಗಳ ಜೊತೆಗೆ, 2047 ರ ವೇಳೆಗೆ ಭಾರತವು 30 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಲು ಆಶಿಸುತ್ತಿರುವುದರಿಂದ ಮೂಲಸೌಕರ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಲು ಸರ್ಕಾರವು ತನ್ನ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಮುಂಬರುವ ಮಧ್ಯಂತರ ಬಜೆಟ್ನಲ್ಲಿ ಆದಾಯ ತೆರಿಗೆ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಅಸಂಭವವಾದರೂ, ಸಣ್ಣ ಬದಲಾವಣೆಗಳನ್ನು ತಳ್ಳಿಹಾಕಲಾಗುವುದಿಲ್ಲ.