Budget 2025 | ಸತತ 8ನೇ ಬಾರಿಗೆ ಬಜೆಟ್​ ಮಂಡಿಸಿದ ವಿತ್ತ ಸಚಿವೆ; 77 ನಿಮಿಷಗಳ ಸುದೀರ್ಘ ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್​​​

Untitled design (84)
Published on

ನವದೆಹಲಿ: ​ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರದಂದು (ಫೆಬ್ರವರಿ 1) 2025-26 ರ ಹಣಕಾಸು ವರ್ಷದ ಎಂಟನೇ ಕೇಂದ್ರ ಬಜೆಟ್ ಅನ್ನು(Budget 2025) ಮಂಡಿಸಿದರು. ಈ ಬಜೆಟ್ ಮೋದಿ ಸರ್ಕಾರದ ಎರಡನೇ ಪೂರ್ಣ ಬಜೆಟ್ ಆಗಿದೆ. ಸತತ 8ನೇ ಬಾರಿಗೆ ದೇಶದ ಬಜೆಟ್ ಮಂಡಿಸಿದ್ದ ಹಣಕಾಸು ಸಚಿವೆ, ರೈತರಿಂದ ಮಧ್ಯಮ ವರ್ಗದವರೆಗೆ ತೆರಿಗೆ, ಔಷಧಗಳು, ಯಾವುದನ್ನು ಅಗ್ಗಗೊಳಿಸಲಾಗುವುದು, ಯಾವುದನ್ನು ದುಬಾರಿ ಮಾಡಲಾಗುವುದು ಎಂಬ ಮಾಹಿತಿ ನೀಡಿದರು.

ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇದುವರೆಗೂ ಮಂಡಿಸಿರುವ ಬಜೆಟ್​​ನಲ್ಲಿ ಸಂಸತ್ತಿನಲ್ಲಿ ಎಷ್ಟು ದೀರ್ಘ ಭಾಷಣ ಮಾಡಿದ್ದಾರೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. 2025-26 ಆರ್ಥಿಕ ವರ್ಷದ ಬಜೆಟ್​​ ಮಂಡನೆಯಲ್ಲಿ ಸುಮಾರು ಒಂದು ಗಂಟೆ 17 ನಿಮಿಷ ಅಂದರೆ 77 ನಿಮಿಷಗಳ ಭಾಷಣ ಮಾಡಿದರು. 2024ರಲ್ಲಿ ಸಾರ್ವತ್ರಿಕ ಚುನಾವಣೆಗಳ ಕಾರಣ ಹಣಕಾಸು ಸಚಿವರು 1 ಫೆಬ್ರವರಿ 2024ರಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದರು. ಆ ವೇಳೆ ಅವರ ಬಜೆಟ್ ಭಾಷಣ 56 ನಿಮಿಷಗಳ ಕಾಲ ನಡೆಯಿತು.

ಸಾರ್ವತ್ರಿಕ ಚುನಾವಣೆಯ ನಂತರ ಮೋದಿ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿತು. ನಂತರ ಹಣಕಾಸು ಸಚಿವರು 23 ಜುಲೈ 2024ರಂದು ಪೂರ್ಣ ಬಜೆಟ್ ಮಂಡಿಸಿದರು. ಈ ಬಜೆಟ್ ಭಾಷಣವು 01 ಗಂಟೆ 25 ನಿಮಿಷಗಳದ್ದಾಗಿತ್ತು. ಇದಕ್ಕೂ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ರ ಆರ್ಥಿಕ ವರ್ಷದ ಬಜೆಟ್​ ಮಂಡನೆ ವೇಳೆ 87 ನಿಮಿಷಗಳ ಬಜೆಟ್ ಭಾಷಣವನ್ನು ಓದಿದ್ದರು. 2019ರಲ್ಲಿ ಅವರ ಬಜೆಟ್ ಭಾಷಣವು 2 ಗಂಟೆ 17 ನಿಮಿಷಗಳು ಹಾಗೂ 2022ರಲ್ಲಿ 92 ನಿಮಿಷಗಳ ಕಾಲ ಬಜೆಟ್​ ಮಂಡನೆ ವೇಳೆ ಮಾತನಾಡಿದರು.

ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಇತಿಹಾಸದಲ್ಲಿ ಸುದೀರ್ಘ ಬಜೆಟ್ ಭಾಷಣವನ್ನು ಓದಿದ ದಾಖಲೆಯನ್ನೂ ಹೊಂದಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 2020ರ ಕೇಂದ್ರ ಬಜೆಟ್ ಭಾಷಣವು ಭಾರತದ ಇತಿಹಾಸದಲ್ಲಿ 2 ಗಂಟೆ 42 ನಿಮಿಷಗಳ ಕಾಲ ಸುದೀರ್ಘ ಬಜೆಟ್ ಭಾಷಣವಾಗಿದೆ. ಈ ಸಮಯದಲ್ಲಿ ಅವರು ಕೇಂದ್ರ ಬಜೆಟ್ 2019 ಅನ್ನು ಮಂಡಿಸಲು ತಮ್ಮದೇ ಆದ 2 ಗಂಟೆ 17 ನಿಮಿಷಗಳ ದಾಖಲೆಯನ್ನು ಮುರಿದರು. ದಿವಂಗತ ಅರುಣ್ ಜೇಟ್ಲಿ ಅವರ 2014ರ ಬಜೆಟ್ ಭಾಷಣವು 2 ಗಂಟೆ 10 ನಿಮಿಷಗಳಾಗಿತ್ತು.

2019ರಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2019-2020ರ ಹಣಕಾಸು ವರ್ಷಕ್ಕೆ ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದರು. ಆ ಭಾಷಣದ ಮೂಲಕ ಅವರು ಸುದೀರ್ಘ ಬಜೆಟ್ ಭಾಷಣದ ದಾಖಲೆಯನ್ನು ಮುರಿದರು. ಅವರು ಎರಡು ಗಂಟೆ 17 ನಿಮಿಷಗಳ ಕಾಲ ಮಾತನಾಡಿದರು.

ಮುಂದಿನ ವರ್ಷ 2020-21ನೇ ಸಾಲಿನ ಬಜೆಟ್ ಮಂಡಿಸುವಾಗ ಎರಡು ಗಂಟೆ 42 ನಿಮಿಷಗಳ ಕಾಲ ಮಾತನಾಡಿದ ಅವರು ತಮ್ಮದೇ ದಾಖಲೆಯನ್ನು ಮುರಿದರು. ಅದು ಸಂಪೂರ್ಣ ಭಾಷಣವೂ ಆಗಿರಲಿಲ್ಲ! ಆರೋಗ್ಯದ ಕಾರಣದಿಂದ ಅಂದು ಭಾಷಣ ಮೊಟಕುಗೊಳಿಸಬೇಕಾಗಿ ಬಂದಾಗ ಬಜೆಟ್‌ನ ಎರಡು ಪುಟಗಳು ಉಳಿದಿದ್ದವು. 2021-22ರಲ್ಲಿ ಅವರ ಬಜೆಟ್ ಭಾಷಣ 100 ನಿಮಿಷಗಳು. 2022-23ನೇ ಸಾಲಿನ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಒಟ್ಟು ಒಂದೂವರೆ ಗಂಟೆಗಳ ಕಾಲ ಮಾತನಾಡಿದರು.

 ಅನೇಕ ದಾಖಲೆ ಹೊಂದಿರುವ ಸಚಿವೆ ನಿರ್ಮಲ ಸೀತಾರಾಮನ್​​​

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಅವರು ಭಾರತದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವರಾಗಿದ್ದಾರೆ. ಇದರೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ (ಫೆಬ್ರವರಿ 1, 2025) ದಾಖಲೆಯ ಎಂಟನೇ ಬಜೆಟ್ ಅನ್ನು ಮಂಡಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ವಿತ್ತ ಸಚಿವೆ ಸೀತಾರಾಮನ್ ಅವರು 2020ರಲ್ಲಿ ದೇಶದಲ್ಲೇ ಅತಿ ಉದ್ದದ ಬಜೆಟ್ ಭಾಷಣ ಮಾಡಿದ ದಾಖಲೆಯನ್ನು ಮಾಡಿದ್ದಾರೆ, ಅವರು 2 ಗಂಟೆ 40 ನಿಮಿಷಗಳ ಸುದೀರ್ಘ ಭಾಷಣ ಮಾಡಿದರು.(ಏಜೆನ್ಸೀಸ್)​​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net