

Budget 2025: ವಿತ್ತ ಸಚಿವೆಯಾಗಿ ತಮ್ಮ 8ನೇ ಬಜೆಟ್ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್, ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಿಗೆ ಬಂಪರ್ ಘೋಷಣೆ ಮಾಡಿದರು.
ಮುಂದಿನ ವರ್ಷ ಭಾರತದಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ 10,000 ಹೆಚ್ಚುವರಿ ಸೀಟುಗಳನ್ನು ಸೇರಿಸಲಾಗುವುದು ಹಾಗೂ ಮುಂದಿನ ಐದು ವರ್ಷಗಳಲ್ಲಿ ಒಟ್ಟು 75,000 ಸೀಟುಗಳನ್ನು ಸೇರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಐಐಟಿಗಳು ಅಥವಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ಗೆ ಸಂಬಂಧಿಸಿದಂತೆ ಸಿಹಿ ಸುದ್ದಿಯನ್ನು ನೀಡಿದರು. ಅದೇನೆಂದರೆ, ದೇಶದಲ್ಲಿ 23 ಐಐಟಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10 ವರ್ಷಗಳಲ್ಲಿ ಶೇ. 100 ಕ್ಕಿಂತ ಹೆಚ್ಚಾಗಿದೆ ಮತ್ತು 2014ರ ನಂತರ ಸ್ಥಾಪಿಸಲಾದ ಐದು ಐಐಟಿಗಳಿಗೆ 6,500 ಹೆಚ್ಚುವರಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಮೂಲಸೌಕರ್ಯವನ್ನು ರಚಿಸಲಾಗುವುದು ಎಂದು ಘೋಷಿಸಿದರು.
ಕೌಶಲ್ಯವರ್ಧನೆ ಮತ್ತು ಉನ್ನತ ಶಿಕ್ಷಣದಲ್ಲಿ ಹೂಡಿಕೆ ಮಾಡುವತ್ತ ಹೆಚ್ಚಿನ ಗಮನ ಹರಿಸುವ ಭಾಗವಾಗಿ, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ಗೆ ಅಗತ್ಯವಾದ ಕೌಶಲ್ಯಗಳೊಂದಿಗೆ ಯುವಕರನ್ನು ಸಜ್ಜುಗೊಳಿಸಲು ಜಾಗತಿಕ ಪರಿಣತಿ ಮತ್ತು ಪಾಲುದಾರಿಕೆಯೊಂದಿಗೆ ಐದು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ವಿತ್ತ ಸಚಿವೆ ಘೋಷಣೆ ಮಾಡಿದರು. ಈ ಶ್ರೇಷ್ಠತೆಯ ಕೇಂದ್ರವನ್ನು 500 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದರು.
ಅಂದಹಾಗೆ ಸೀತಾರಾಮನ್ ಅವರು ತಮ್ಮ ಸತತ ಎಂಟನೇ ಬಜೆಟ್ ಭಾಷಣವನ್ನು ಬೆಳಗ್ಗೆ 11 ಗಂಟೆಯ ನಂತರ ಪ್ರಾರಂಭಿಸಿದರು. ಇದು ದಾಖಲೆಯ ಬಜೆಟ್ ಆಗಿದೆ. ಆದರೆ ತಕ್ಷಣವೇ ಗದ್ದಲ ಉಂಟಾಯಿತು, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಸಂಸದರು ಮಹಾ ಕುಂಭ ಮೇಳದ ಕಾಲ್ತುಳಿತದ ಬಗ್ಗೆ ಮೊದಲು ಚರ್ಚೆ ನಡೆಸಬೇಕೆಂದು ಘೋಷಣೆಗಳನ್ನು ಕೂಗಿದರು. ಕೆಲವು ನಿಮಿಷಗಳ ನಂತರ ಪ್ರತಿಭಟನಾ ನಿರತ ಸಂಸದರು ಸಾಂಕೇತಿಕವಾಗಿ ಹೊರನಡೆದು, ಹೊರಟು ಸದನವನ್ನು ಮತ್ತೆ ಸೇರಿದರು. ಶ್ರೀಮತಿ ಸೀತಾರಾಮನ್ ಅವರು ಬಜೆಟ್ ಓದುವುದನ್ನು ಮುಂದುವರೆಸಿದರು.