BSF ಯೋಧನನ್ನು ವಾಪಾಸ್​ ಕಳುಹಿಸಲು ಪಾಕ್​ ನಕಾರ! ಮಗನನ್ನು ಸುರಕ್ಷಿತವಾಗಿ ಕರೆತರುವಂತೆ ಹೆತ್ತವರು ಕಣ್ಣೀರು

ವಿಜಯವಾಣಿ (73)
Published on

BSF Jawan: ಕಾಶ್ಮೀರದ ಪಹಲ್ಗಾಮ್​ನಲ್ಲಿ 26 ಅಮಾಯಕರ ಜೀವ ಬಲಿಪಡೆದ ಉಗ್ರರನ್ನು ಸದೆಬಡಿಯಲು ಭಾರತ ಪಣತೊಟ್ಟಿದ್ದು, ಪಾಕಿಸ್ತಾನ ಮತ್ತು ಭಾರತ ಗಡಿಭಾಗದಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ. ಇದರೊಂದಿಗೆ ಯಾರೂ ನುಸುಳಿ ಬರದಂತೆ ನೋಡಿಕೊಳ್ಳಲು ಕಟ್ಟೆಚ್ಚರ ವಹಿಸಲಾಗಿದೆ. ಇಂಥಾ ಸಮಯದಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನ ಗಡಿಯೊಳಗೆ ಪ್ರವೇಶಿಸಿದ ಬಿಎಸ್​ಎಫ್​ ಯೋಧ ಪಿಕೆ ಸಾಹುರನ್ನು ಇದೀಗ ಪಾಕ್ ಸೇನೆ ಬಂಧಿಸಿದೆ.

ಪಹಲ್ಗಾಮ್​ ಗುಂಡಿನ ದಾಳಿ ಹಿನ್ನೆಲೆ ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಠಿಣ ಸಮಯದಲ್ಲಿ ಬಿಎಸ್‌ಎಫ್‌ನ 182ನೇ ಬೆಟಾಲಿಯನ್‌ನಲ್ಲಿ ಕೆಲಸ ಮಾಡುತ್ತಿದ್ದ ಯೋಧ ಸಾಹುರನ್ನು ಪಂಜಾಬ್‌ನ ಪಾಕ್​ ಸೇನೆ ಸೆರೆಹಿಡಿದಿದೆ. ಪಂಜಾಬ್​ನ ಅಂತರರಾಷ್ಟ್ರೀಯ ಗಡಿಯನ್ನು ಆಕಸ್ಮಿಕವಾಗಿ ದಾಟಿ ಬಂದ ಯೋಧನನ್ನು ಬಂಧಿಸಿರುವ ಪಾಕ್​, ಸಾಹು ಅವರನ್ನು ಕಳಿಸಲು ನಕಾರ ಮಾಡುತ್ತಿದೆ. ಇತ್ತೀಚೆಗಷ್ಟೇ ಹೋಳಿ ಹಬ್ಬದ ರಜೆಗೆ ಊರಿಗೆ ಹೋಗಿದ್ದ ಸಾಹು, ಕೆಲವು ವಾರಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ಮರಳಿದ್ದರು.

ಪುತ್ರನನ್ನು ನೆನೆದು ಭಾವುಕರಾದ ಯೋಧನ ತಂದೆ ಭೋಲನಾಥ್ ಸಾಹು, "ನಮ್ಮ ಮಗನ ಬಗ್ಗೆ ಬೆಟಾಲಿಯನ್‌ನ ಕಮಾಂಡಿಂಗ್ ಅಧಿಕಾರಿಗಳು ಕರೆ ಮಾಡಿ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು. ಮಂಗಳವಾರ (ಏ.22) ರಾತ್ರಿ ನಾನು ಕೊನೆಯ ಬಾರಿಗೆ ಪುತ್ರನೊಂದಿಗೆ ಮಾತನಾಡಿದ್ದು. ಕಳೆದ 17 ವರ್ಷಗಳಿಂದ ಅವನು ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ದಯವಿಟ್ಟು ನಮ್ಮ ಮಗನನ್ನು ಆದಷ್ಟು ಬೇಗ ಸುರಕ್ಷಿತವಾಗಿ ಪಾಕ್​ನಿಂದ ಕರೆತನ್ನಿ" ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net