

Dogs : ಮೊರೊಕ್ಕೊ ಸರ್ಕಾರ ಬರೋಬ್ಬರಿ ಮೂರು ಮಿಲಿಯನ್ ಅಂದರೆ, 30 ಲಕ್ಷ ಬೀದಿ ನಾಯಿಗಳನ್ನು ಕೊಲ್ಲಲು ಯೋಜಿಸಿದೆ. ಅದಕ್ಕೆ ಕಾರಣ ಫಿಫಾ ವಿಶ್ವಕಪ್ ( FIFA World Cup ) ಎಂಬುದೇ ಅಚ್ಚರಿಯ ಸಂಗತಿಯಾಗಿದೆ.
ಅಂದಹಾಗೆ ಮೊರೊಕ್ಕೊ ಉತ್ತರ ಆಫ್ರಿಕಾದಲ್ಲಿರುವ ಒಂದು ಪುಟ್ಟ ದೇಶ. ಪೋರ್ಚುಗಲ್, ಸ್ಪೇನ್ ದೇಶಗಳ ಜತೆ 2030ರಲ್ಲಿ ಫಿಫಾ ಫುಟ್ಬಾಲ್ ವಿಶ್ವಕಪ್ ಆಯೋಜಿಸುವ ಅವಕಾಶವನ್ನು ಮೊರಾಕ್ಕೊ ಪಡೆದುಕೊಂಡಿದೆ. ಫುಟ್ಬಾಲ್ ಕ್ರೀಡೆಗೆ ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗವಿದೆ. 2030ರ ಫಿಫಾ ವಿಶ್ವಕಪ್ ಟೂರ್ನಿಯು 100ನೇ ವಾರ್ಷಿಕೋತ್ಸವ ಆಗಿರುವುದರಿಂದ ವಿಶೇಷ ಮಹತ್ವವನ್ನು ಸಹ ಪಡೆದುಕೊಂಡಿದೆ.
ಫಿಫಾ ವಿಶ್ವಕಪ್ಗಾಗಿ ಕ್ರೀಡಾಂಗಣಗಳನ್ನು ಸಜ್ಜುಗೊಳಿಸುವುದು, ಪ್ರೇಕ್ಷಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಮತ್ತು ಆಟಗಾರರಿಗೆ ವಸತಿ ಸೌಕರ್ಯ ಒದಗಿಸುವುದು ಸೇರಿದಂತೆ ಪಂದ್ಯಾವಳಿಯನ್ನು ಅತ್ಯುತ್ತಮ ರೀತಿಯಲ್ಲಿ ಆಯೋಜಿಸಲು ಮೊರೊಕ್ಕೊ ಸರ್ಕಾರ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಆದರೆ, ಸರ್ಕಾರವು ಫಿಫಾ ವಿಶ್ವಕಪ್ ನೆಪವಾಗಿಟ್ಟುಕೊಂಡು ತೆಗೆದುಕೊಂಡಿರುವ ಮತ್ತೊಂದು ನಿರ್ಧಾರ ವಿಶ್ವಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ. ನಗರಗಳನ್ನು ಸ್ವಚ್ಛಗೊಳಿಸುವ ಕಾರ್ಯಾಚರಣೆ ಎಂದು ಹೇಳಿಕೊಂಡು ಮೂರು ಮಿಲಿಯನ್ ಅಂದರೆ, 30 ಲಕ್ಷ ಬೀದಿ ನಾಯಿಗಳನ್ನು ಕೊಲ್ಲಲು ಆದೇಶಿಸಿದೆ.
ನಾಯಿಗಳಿಗೆ ಅತ್ಯಂತ ವಿಷಕಾರಿಯಾದ ಸ್ಟ್ರೈಕ್ನೈನ್ ಇಂಜೆಕ್ಷನ್ ನೀಡಿ ಕೊಲ್ಲಲಾಗುತ್ತಿದೆ ಎಂದು ವರದಿಯಾಗಿದೆ. ಕೆಲವು ಸ್ಥಳಗಳಲ್ಲಂತೂ ನಾಯಿಗಳಿಗೆ ಗುಂಡು ಹಾರಿಸಿ, ಕರೆಂಟ್ ಶಾಕ್ ಕೊಟ್ಟ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೊರಾಕ್ಕೊದಲ್ಲಿ ನಾಯಿಗಳನ್ನು ಕೊಲ್ಲುವುದಕ್ಕೆ ನಿಷೇಧವಿದ್ದರೂ, ಫಿಫಾ ಪಂದ್ಯಾವಳಿಗಾಗಿಯೇ ಈ ನಿಷೇಧವನ್ನು ತೆಗೆದುಹಾಕಲಾಗಿದೆ.
ಮೊರೊಕ್ಕೊ ಸರ್ಕಾರದ ಈ ಕ್ರಮವು ಪ್ರಾಣಿ ಕಲ್ಯಾಣ ಕಾರ್ಯಕರ್ತರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ನಾಯಿಗಳನ್ನು ನಿಯಂತ್ರಿಸಲು ಹಲವು ಮಾನವೀಯ ಮಾರ್ಗಗಳಿದ್ದರೂ, ಮೊರೊಕ್ಕೊ ಸರ್ಕಾರ ಕ್ರೂರವಾಗಿ ವರ್ತಿಸುತ್ತಿದೆ. ಜಗತ್ತಿನ ಎಲ್ಲ ಪ್ರಾಣಿ ಕಲ್ಯಾಣ ಸಂಸ್ಥೆಗಳು ಇದನ್ನು ಬಲವಾಗಿ ವಿರೋಧಿಸಬೇಕಿದೆ ಮತ್ತು ಫಿಫಾ ಕೂಡ ಇದನ್ನು ಖಂಡಿಸಬೇಕೆಂದು ಪ್ರಾಣಿ ಪ್ರಿಯರು ಒತ್ತಾಯಿಸುತ್ತಿದ್ದಾರೆ. (ಏಜೆನ್ಸೀಸ್)