

ಬಿಹಾರ: ಉದ್ಘಾಟನೆಗೊಂಡ ಅದೆಷ್ಟೋ ಕಟ್ಟಡಗಳು ಕಳಪೆ ಕಾಮಗಾರಿಗಳಿಂದಾಗಿ ಕೆಲವೇ ದಿನ, ತಿಂಗಳು, ವರ್ಷಗಳಲ್ಲಿ ಹಾಳಾದ ಬಗ್ಗೆ ಇಲ್ಲವೇ ಕುಸಿದು ಬಿದ್ದ ಬಗ್ಗೆ ಹಲವಾರು ಉದಾಹರಣೆಗಳಿವೆ. ಆದರೆ ಇಲ್ಲೊಂದು ಕಡೆ ಕೋಟ್ಯಂತರ ರೂಪಾಯಿ ಖರ್ಚಿನಲ್ಲಿ ನಿರ್ಮಿಸಲಾಗಿದ್ದ ಸೇತುವೆಯೊಂದು ಉದ್ಘಾಟನೆಗೂ ಮೊದಲೇ ಕುಸಿದುಬಿದ್ದಿದೆ.
ಬಿಹಾರದ ಬೆಗುಸರಾಯ್ ಎಂಬಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆಯೊಂದು ಉದ್ಘಾಟನೆಗೂ ಮೊದಲೇ ಕುಸಿದು ಬಿದ್ದಿದೆ. ಗಂಡಕ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆ 206 ಮೀಟರ್ ಉದ್ದವಿದ್ದು, ಭಾನುವಾರ ಬೆಳಗ್ಗೆ ಈ ಸೇತುವೆ ಮುರಿದುಹೋಗಿದ್ದು, ಒಂದು ಭಾಗ ನೀರಿಗೆ ಬಿದ್ದಿದೆ.
ಮುಖ್ಯಮಂತ್ರಿಯವರ ನಬಾರ್ಡ್ ಯೋಜನೆಯಡಿ ಈ ಸೇತುವೆಯನ್ನು ನಿರ್ಮಿಸಲಾಗಿದ್ದು, ರಸ್ತೆ ಸಂಪರ್ಕದ ಕೊರತೆ ಹಿನ್ನೆಲೆಯಲ್ಲಿ ಇದರ ಉದ್ಘಾಟನೆ ಆಗಿರಲಿಲ್ಲ. ಇತ್ತೀಚೆಗೆ ಈ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಂಬಂಧಿತರಿಗೆ ಈ ಕುರಿತು ಮಾಹಿತಿಯನ್ನೂ ನೀಡಲಾಗಿತ್ತು.
ಈ ಸೇತುವೆಯ ನಿರ್ಮಾಣ ಕಾಮಗಾರಿ 2016ರಲ್ಲಿ ಆರಂಭಗೊಂಡು 2017ರಲ್ಲಿ ಮುಗಿದಿದ್ದರೂ ರಸ್ತೆ ಸಂಪರ್ಕದ ಕೊರತೆಯಿಂದಾಗಿ ಉದ್ಘಾಟನೆ ಮಾಡಿರಲಿಲ್ಲ. ಇಲ್ಲಿನ ಆಕೃತಿ ತೊಲ ಚೌಕಿ ಮತ್ತು ಬಿಷ್ಣಾಪುರದ ಆಹೋಕ್ ಗಂಡಕ್ ಘಾಟ್ ಮಧ್ಯೆ ಈ ಸೇತುವೆ ನಿರ್ಮಿಸಲಾಗಿತ್ತು.