VIRAL VIDEO | ಅತಿಥಿಗಳ ಎದುರೇ ಮದುವೆ ಮಂಟಪದಲ್ಲಿ ಹೊಡೆದಾಡಿದ ವಧು-ವರ..!

viral vedio
Published on

ನವದೆಹಲಿ: ಮದುವೆ ಎಂದರೆ ಏಳೇಳು ಜನ್ಮಕ್ಕೂ ಉಳಿಯುವ ಸಂಬಂಧ ಎಂದು ಹೇಳುತ್ತಾರೆ. ವಧು ಅಥವಾ ವರನ ಕಡೆಯವರ ಗಲಾಟೆಯಿಂದ ಮದುವೆ ನಿಂತ ಘಟನೆ ಬಗ್ಗೆ ಕೇಳಿರುತ್ತೀರಿ. ಅಥವಾ ವಧು ವಿವಾಹ ನಿರಾಕರಿಸುವುದು, ವರ ನಿರಾಕರಿಸಿ ಮದುವೆ ಮುರಿದು ಬೀಳುವ ಪ್ರಸಂಗವೂ ನಡೆಯುತ್ತಿರುತ್ತದೆ. ಮದುವೆ ದಿನವೇ ಮದುಮಗಳು ಅಥವಾ ಮದುಮಗ ತಮ್ಮ ಹಳೆ ಪ್ರೀತಿ ಜೊತೆ ಓಡಿಹೋದ ಘಟನೆಯೂ ನಮಗೆ ಹೊಸದಲ್ಲ. ಆದರೆ ಮದುವೆ ಗಂಡು ಮತ್ತು ಮದುಮಗಳು ಎಲ್ಲರ ಸಮ್ಮುಖದಲ್ಲಿ ಹೊಡೆದಾಡಿದ ಪ್ರಸಂಗ ಖಂಡಿತವಾಗಿಯೂ ಕೇಳಿರಲಿಕ್ಕಿಲ್ಲ. ಅಂತಹದೇ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆ ಎಲ್ಲಿ ನಡೆದ್ದು ಎನ್ನುವ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಈ ವಿಡಿಯೋ ಕ್ಲಿಪ್​ನಲ್ಲಿ ವರ ಮತ್ತು ವಧು ಹೊಡೆದಾಡಿಕೊಂಡದ್ದು ಮಾತ್ರ ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿ ಗಂಡು ಮತ್ತು ಹೆಣ್ಣು ವಿವಾಹ ಮಂಟಪದಲ್ಲಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಅವರ ಸುತ್ತಮುತ್ತ ಸಂಬಂಧಿಕರು ಕಿಕ್ಕಿರಿದು ಸಂತೋಷದ ಕ್ಷಣವನ್ನು ಸವಿಯುತ್ತಿರುವುದು ಕಾಣಬಹುದು.

ಆ ಪ್ರದೇಶದ ಸಂಪ್ರದಾಯದಂತೆ ವರ, ವಧುವಿಗೆ ಸಿಹಿಯನ್ನು ತಿನ್ನಿಸುತ್ತಿದ್ದ. ಆದರೆ ವಿಧಿ ಬೇರೆಯದೇ ಇತ್ತು. ಈ ಸುಂದರ ದೃಶ್ಯ, ಕೆಲವೇ ಕ್ಷಣಗಳಲ್ಲಿ ಗಲಾಟೆಯಾಗಿ ಮಾರ್ಪಾಡುಗೊಂಡಿದೆ. ವರ ವಧುವಿಗೆ ಸಿಹಿ ತಿಂಡಿಯನ್ನು ತಿನ್ನಿಸಲು ಯತ್ನಿಸಿದ್ದಾನೆ. ಆದರೆ ಇದು ವಧುವಿಗೆ ಇಷ್ಟವಾಗಿಲ್ಲ. ಹೀಗಾಗಿ, ವಧು ಬಲವಾಗಿ ವರನನ್ನು ಬಲವಾಗಿ ಹಿಂದೆ ತಳ್ಳಿದ್ದಾಳೆ. ನಂತರ ಆಕೆ ವರನ ಕೆನ್ನೆಗೆ ಜೋರಾಗಿ ಹೊಡೆದಿರುವುದು ಕಾಣಬಹುದು. ಆಗ ಸಿಟ್ಟುಗೊಂಡ ವರ, ವಧುವಿನ ಕೆನ್ನೆಗೆ ಸರಿಯಾಗಿ ಬಾರಿಸಿದ್ದಾನೆ.

ಹೀಗೆ ಸಂಬಂಧಿಕರು, ಅತಿಥಿಗಳ ಸಮ್ಮುಖದಲ್ಲೇ ವರ ಮತ್ತು ವಧು ಮಂಟಪದಲ್ಲೇ ಮಾರಾಮಾರಿ ಮಾಡಿಕೊಂಡ ದೃಶ್ಯ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವೇಳೆ ಸಂಬಂಧಿಕರು ಇವರ ಜಗಳವನ್ನು ನಿಲ್ಲಿಸಲು ಮುಂದಾಗಿದ್ದಾರೆ. ಆದರೂ ನಿಲ್ಲದ ವಧು, ವರನನ್ನು ಕೆಳಕ್ಕೆಳೆದು ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು. ಘಟನೆಯ ಬಳಿಕ ವಿವಾಹ ನಡೆಯಿತಾ, ಸಂಧಾನ ನಡೆಯಿತಾ ಅಥವಾ ಮದುವೆ ಮುರಿದು ಬಿತ್ತಾ ಎನ್ನುವುದು ನಿಗೂಢವಾಗಿಯೇ ಉಳಿದುಕೊಂಡಿದೆ.

ವಿವಾಹ ದಿನದಂದೇ ವಧು, ವರ ಹೊಡೆದಾಡಿಕೊಂಡ ಪ್ರಸಂಗದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಟ್ವೀಟ್​ ಮೂಲಕ ಕಾಲೆಳೆದಿದ್ದಾರೆ. ಇದು ವಿವಾಹವೋ ಅಥವಾ ವಿಚ್ಛೇದನವೋ ಅಂತ ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಕೊನೆಗೂ ಇವರಿಬ್ಬರ ವಿವಾಹ ನಡೆಯಿತೇ ಎಂದು ಟ್ವಿಟ್ ಮಾಡಿ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net