14 ದಿನದಲ್ಲಿ 10 ಸಾವಿರ ಟಿಕೆಟ್​ ಮಾರಾಟ!; ಇದು ಭ್ರಮೆ ತಂಡದ ಸಾಹಸ

WhatsApp Image 2020-10-04 at 10.12.07 PM
Published on

ಬೆಂಗಳೂರು: ಓಟಿಟಿ ವೇದಿಕೆಗೆ ಬೇಡಿಕೆ ಬಂದಿದೆ. ಪ್ರೇಕ್ಷಕ ಓಟಿಟಿ ವೇದಿಕೆಯಲ್ಲಿನ ಸಿನಿಮಾಗಳಿಗೂ ಮನಸೋತಿದ್ದಾನೆ. ಬೇರೆ ಭಾಷೆಗಳಿಗೆ ಹೋಲಿಕೆ ಮಾಡಿದರೆ, ಕನ್ನಡದಲ್ಲಿ ಅದರ ಪ್ರಮಾಣ ಚೂರು ಕಡಿಮೆ ಆದರೂ, ಇದೀಗ ಬೆಳವಣಿಗೆಯ ಪರ್ವ ಶುರುವಾಗಿದೆ. ನೇರವಾಗಿ ಓಟಿಟಿಯಲ್ಲಿಯೇ ಕನ್ನಡ ಸಿನಿಮಾ ಬಿಡುಗಡೆ ಆಗುತ್ತಿವೆ. ಸ್ಟಾರ್ ನಟ, ನಟಿಯರ ಸಿನಿಮಾದ ಜತೆಗೆ ಹೊಸಬರೂ ತಾವೇನು ಕಮ್ಮಿ ಇಲ್ಲ ಎಂಬಂತೆ ಆನ್​ಲೈನ್​ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಅದೇ ರೀತಿ ನ.1 ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಭ್ರಮೆ’ ಹೆಸರಿನ ಸಿನಿಮಾವೊಂದು ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಆಡಿಯೋ ಸಹ ಬಿಡುಗಡೆ ಮಾಡಿಕೊಂಡಿದೆ.

ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಪುತ್ರ ನವೀನ್​ ರಘು ‘ಭ್ರಮೆ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ನಮ್ಮ ಫ್ಲಿಕ್ಸ್​​ನಲ್ಲಿ ಈ ಸಿನಿಮಾ ನ.1ಕ್ಕೆ ಬಿಡುಗಡೆ ಆಗಲಿದೆ. ಅದರ ನಿಮಿತ್ತ ಎರಡು ವಾರಗಳ ಹಿಂದೆ ಟಿಕೆಟ್​ ಮಾರಾಟಕ್ಕಿಟ್ಟಿದ್ದ ಹೊಸ ತಂಡಕ್ಕೆ ಅಚ್ಚರಿಯ ಫಲಿತಾಂಶ ಸಿಕ್ಕಿದೆ. ಕೇವಲ 15 ದಿನದ ಅವಧಿಯಲ್ಲಿ 10 ಸಾವಿರಕ್ಕೂ ಅಧಿಕ ಟಿಕೆಟ್​ಗಳನ್ನು ತಂಡ ಮಾರಾಟ ಮಾಡಿ ಖುಷಿಯ ಅಲೆಯಲ್ಲಿ ತೇಲುತ್ತಿದೆ.

ಇತ್ತೀಚೆಗಷ್ಟೇ ಆ ವಿಚಾರವನ್ನು ಹಂಚಿಕೊಳ್ಳುವ ಉದ್ದೇಶಕ್ಕೆ ಸುದ್ದಿಗೋಷ್ಠಿ ಕರೆದಿದ್ದ ತಂಡ, ಈ ಮೊದಲೇ ಹೇಳಿಕೊಂಡಂತೆ ಲಕ್ಕಿ ವಿಜೇತರಿಗೆ ಬೈಕ್​ ನೀಡಿದ್ದಾರೆ. ಕೇವಲ 99 ರೂಪಾಯಿ ಪಡೆದುಕೊಂಡು ಈ ಚಿತ್ರವನ್ನು ನಮ್ಮ ಫ್ಲಿಕ್ಸ್ ಕನ್ನಡದ ಓಟಿಟಿಯಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಈ ಹಿಂದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನವೀನ್​ ರಘು, ಭ್ರಮೆ ಮೂಲಕ ನಾಯಕನಾಗಿ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಕುಂದಾಪುರದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಚರಣರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಗೀತ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್​ ಸಾಹಿತ್ಯದ ಜತೆಗೆ ಸಂಗೀತವನ್ನು ನೀಡಿದ್ದಾರೆ.

ನಾಯಕನಟ ನವೀನ್, ನಾಯಕಿ ಇಶಾನಾ ಮತ್ತು ಅಂಜನಾಗೌಡ ಕೂಡ ತಮ್ಮ ಪಾತ್ರಗಳ ಕುರಿತು ಹೇಳಿಕೊಂಡರು. ಮಜಾಟಾಕೀಸ್ ಪವನ್ ಈ ಚಿತ್ರದಲ್ಲಿ ಹಾಸ್ಪಿಟಲ್ ಅಟೆಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಮುಖ್ಯ ಅತಿಥಿಗಳಾಗಿದ್ದ ಬಾಮ ಹರೀಶ್, ಭಾಮ ಗಿರೀಶ್, ನೆಟ್‍ಫ್ಲಿಕ್ಸನ ವಿಜಯಕುಮಾರ್ ಕೂಡ ಚಿತ್ರದ ಬಗ್ಗೆ ಹಾಗೂ ತಂಡದ ಕುರಿತಂತೆ ಮಾತನಾಡಿದರು. ಮೊದಲ ಡ್ರಾ ವಿಜೇತರನ್ನು ಸಂಗೀತ ನಿರ್ದೇಶಕ ವಿ. ನಾಗೇಂದ್ರಪ್ರಸಾದ್ ಆಯ್ಕೆಮಾಡಿದರು. 23682 ಟಿಕೆಟ್ ನಂಬರಿನ ರಾಜರಾಜೇಶ್ವರಿ ನಗರದವರೊಬ್ಬರು ಬೈಕ್‍ನ ವಿಜೇತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ ಮತ್ತು ಬುಲೆಟ್​ ಬೈಕ್​ ನೀಡುವ ಗುರಿಯೂ ಚಿತ್ರತಂಡದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net