

ಬೆಂಗಳೂರು: ಕಲಿಯುಗ ವೈಕುಂಠ ಎಂದೇ ಪ್ರಸಿದ್ಧವಾಗಿರುವ ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾಕ್ಷೇತ್ರ ತಿರುಪತಿ ತಿರುಮಲದಲ್ಲಿ ಇದೇ ಸೆ.24 ರಿಂದ 10 ದಿನಗಳ ಕಾಲ ವಿಜೃಂಭಣೆಯ ಬ್ರಹ್ಮೋತ್ಸವ ನಡೆಯಲಿದ್ದು, ಆಗಮಿಸು ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಟಿಟಿಡಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಟಿಟಿಡಿ ಸದಸ್ಯ ನರೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನರೇಶ್, ಟಿಟಿಡಿಯ ಹೊಸ ಆಡಳಿತ ಮಂಡಳಿ ರಚನೆಯಾದ ಬಳಿಕ ನಡೆಯುತ್ತಿರುವ ಮೊದಲ ಬ್ರಹ್ಮೋತ್ಸವ ಇದಾಗಿದ್ದು, ಭಕ್ತರಿಗೆ ಯಾವುದೇ ಹಂತದಲ್ಲೂ ಯಾವ ರೀತಿಯ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಲಾಗಿದೆ. ಸೆ.24ರಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಾಡಿನ ಜನತೆಯ ಪರವಾಗಿ ತಿಮ್ಮಪ್ಪನಿಗೆ ವಸ ಸಮರ್ಪಣೆ ಮಾಡುವ ಮೂಲಕ 10 ದಿನಗಳ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಬ್ರಹ್ಮೋತ್ಸವ ಸಂದರ್ಭದಲ್ಲಿ ನಾಲ್ಕುಪಟ್ಟು ಹೆಚ್ಚು ಭಕ್ತರು ಆಗಮಿಸುವುದರಿಂದ ಭಕ್ತರಿಗೆ ಸುಲಭ ದರ್ಶನ ಮಾಡಿಸುವುದು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳ ಬಗ್ಗೆ ಈಗಾಗಲೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿದಿನ ಒಟ್ಟು 1.16 ಲಕ್ಷ ಜನರಿಗೆ ಆನ್‌ಲೈನ್ ಮೂಲಕ ದರ್ಶನದ ಟಿಕೆಟ್ ವಿತರಿಸಲಾಗುವುದು, 25 ಸಾವಿರ ಆ್ಲೈನ್ ಟಿಕೆಟ್‌ಗಳನ್ನು ವಿತರಿಸಲಾಗುವುದು. ಬ್ರಹ್ಮೋತ್ಸವದ ವೇಳೆಯಲ್ಲಿ ವಿಐಪಿ ದರ್ಶನ, ವಿಶೇಷ ದರ್ಶನ, ವಿಶೇಷ ಸೇವೆಗಳು ಲಭ್ಯ ಇರುವುದಿಲ್ಲ. ಭಕ್ತರ ವಿತರಣೆಗೆ ಪ್ರತಿದಿನ 8 ಲಕ್ಷ ಲಡ್ಡು ತಯಾರಿಸಲಾಗುತ್ತದೆ. ವಸತಿಗಾಗಿ ಆನ್‌ಲೈನ್ ಮತ್ತು ಆ್ಲೈನ್ ಮೂಲಕ 3.5 ಸಾವಿರ ರೂಮ್ ನೀಡಲಾಗುತ್ತದೆ. ಬೆಳಗ್ಗೆ 8 ರಿಂದ ರಾತ್ರಿ 11ರವರೆಗೆ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಬ್ರಹ್ಮೋತ್ಸವ ಸಾಗುವ ಮಾರ್ಗದಲ್ಲಿ ಜನರ ವೀಕ್ಷಣೆಗೆ ಗ್ಯಾಲರಿ ಸೌಲಭ್ಯವಿದ್ದು, ಹಾಲು, ಬಿಸ್ಕತ್, ನೀರನ್ನು ನೀಡಲಾಗುವುದು. ಉತ್ಸವದಲ್ಲಿ ಪಾಲ್ಗೊಳ್ಳಲು 20 ರಾಜ್ಯಗಳ 300ಕ್ಕೂ ಹೆಚ್ಚು ಕಲಾವಿದರ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಲಿವೆ ಎಂದು ನರೇಶ್ ವಿವರಿಸಿದ್ದಾರೆ.
ಭಕ್ತರು ಯಾವುದೇ ಗೊಂದಲಕ್ಕೆ ಒಳಗಾಗದಂತೆ ಎಲ್ಲ ಕಡೆಗಳಲ್ಲಿ ಹೆಲ್ಪ್ ಡೆಸ್ಕ್‌ಗಳನ್ನು ತೆರೆಯಲಾಗಿದೆ. 10 ಸಾವಿರ ಸ್ವಯಂ ಸೇವಕರು, 5 ಸಾವಿರ ಪೊಲೀಸರು, 3 ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಯಾವುದೇ ಹಂತದಲ್ಲೂ ಗೊಂದಲಕ್ಕೆ ಅವಕಾಶವಿಲ್ಲ. ಸುಮಾರು 4 ರಿಂದ 5 ಸಾವಿರ ಕಾರು ಮತ್ತು ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಪಾರ್ಕಿಂಗ್ ಪ್ರದೇಶದಿಂದ ಬೆಟ್ಟಕ್ಕೆ ಬರಲು ಸಮರ್ಪಕ ಎಪಿಎಸ್‌ಆರ್‌ಟಿಸಿ ಸಾರಿಗೆ ಸೌಲಭ್ಯವಿದೆ. ಎಲ್ಲೆಡೆ ಸಾರ್ವಜನಿಕ ಶೌಚಾಲಯಗಳನ್ನು ವ್ಯವಸ್ಥೆಯಿದೆ.