

ಕುಂದಾಪುರ: ದೇಶಾದ್ಯಂತ ಇಂದು ಬ್ರಾಹ್ಮಣ ಸಂಘಟನೆ ಬಲಗೊಳ್ಳುತ್ತಿದೆ. ಶುದ್ಧ ಸದಾಚಾರದ ಬ್ರಾಹ್ಮಣ್ಯದ ಮಹತ್ವದ ಅರಿವು ಎಲ್ಲರಿಗೂ ಉಂಟಾಗುತ್ತಿರುವುದು ಒಳ್ಳೆಯ ಲಕ್ಷಣ. ಮೂವತ್ತು ವರ್ಷಗಳ ಹಿಂದೆ ಹಿರಿಯ ವಿಪ್ರರಿಂದ ಆರಂಭಗೊಂಡ ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್ ವಿವಿಧ ವಲಯಗಳ ಸೇರ್ಪಡೆಯಿಂದ ಉತ್ತಮ ಕಾರ್ಯ ನಡೆಸುತ್ತಿದೆ ಎಂದು ವಿಪ್ರವಾಣಿ ಪತ್ರಿಕೆ ಪ್ರಧಾನ ಸಂಪಾದಕ ಪ್ರೊ.ಶಂಕರ ರಾವ್ ಕಾಳಾವರ ಹೇಳಿದರು.
ಶ್ರೀ ಶಂಕರ ಸಭಾ ಭವನದಲ್ಲಿ ಭಾನುವಾರ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ 30ನೇ ವಾರ್ಷಿಕ ಅಧಿವೇಶನ ಉದ್ಘಾಟಿಸಿ, 103ನೇ ವಿಪ್ರವಾಣಿ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಪರಿಷತ್ತಿನ ಪತ್ರಿಕೆ ವಿಪ್ರವಾಣಿ ಅವಿಚ್ಚಿನ್ನವಾಗಿ ಪ್ರಕಟಗೊಳ್ಳುತ್ತಾ ವಿಪ್ರ ಸಂಘಟನೆ, ಸಂವಹನ, ಜ್ಞಾನಾರ್ಜನೆಯಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದರು.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕ ಡಾ.ಕೆ.ಪಿ.ಪುತ್ತೂರಾಯ ವಿಶೇಷ ಪ್ರವಚನ ನೀಡಿದರು. ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಎಚ್.ಶುಭಚಂದ್ರ ಹತ್ವಾರ್ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಸಮಿತಿ ಸದಸ್ಯ ಯು.ರಾಜೇಶ್ ಕಾರಂತ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಕೃಷ್ಣಾನಂದ ಚಾತ್ರ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಕಾಂತಿ ರಾವ್ ಶುಭ ಹಾರೈಸಿದರು.
ಪರಿಷತ್ ಗೌರವಾಧ್ಯಕ್ಷ ಬಿ.ಎಸ್.ಅನಂತಪದ್ಮನಾಭ ಬಾಯಿರಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ಖಜಾಂಚಿ ರಘುರಾಮ್ ರಾವ್, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಧ್ಯಾ ಉಡುಪ, ಯುವ ವೇದಿಕೆ ಅಧ್ಯಕ್ಷ ಅವನೀಶ್ ಹೊಳ್ಳ ಮತ್ತು ಕೋಟೇಶ್ವರ ವಲಯ ಅಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್, ವಿಪ್ರವಾಣಿ ಪ್ರಾಯೋಜಕ ಡಾ.ಲಿಂಗ ಪ್ರಸಾದ್ ಉಪಸ್ಥಿತರಿದ್ದರು.
ಕೋಟೇಶ್ವರ ವಲಯಾಧ್ಯಕ್ಷ ವಾದಿರಾಜ ಹೆಬ್ಬಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಭಟ್, ಸತೀಶ್ ಅಡಿಗ ಮತ್ತು ನಾಗರತ್ನ ಉಡುಪ ಕಾರ್ಯಕ್ರಮ ನಿರೂಪಿಸಿ, ಯುವ ವೇದಿಕೆ ಅಧ್ಯಕ್ಷ ಅವನೀಶ್ ಹೊಳ್ಳ ವಂದಿಸಿದರು.
ಪ್ರೊ.ಶಂಕರ ರಾವ್ ಕಾಳಾವರ ವಿರಚಿತ ಕೆಸರಜ್ಜನ ತ್ರಿಪದಿಗಳು ಎಂಬ ಕವನ ಸಂಕಲನವನ್ನು ಡಾ. ಪುತ್ತೂರಾಯರು ಅನಾವರಣಗೊಳಿಸಿದರು. ಅಗ್ನಿಮಾನ್ ತಲಾರಿ ವಾಮನ ಭಟ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ, ಔದ್ಯೋಗಿಕ ಕ್ಷೇತ್ರದಲ್ಲಿನ ಸಾಧಕ ರಾಜೇಶ್ ಕಾರಂತ, ಶ್ರೀ ಕುಂದೇಶ್ವರ ದೇವಳ ಸಮಿತಿ ಅಧ್ಯಕ್ಷ ಎಸ್.ವಾಸುದೇವ ಯಡಿಯಾಳರನ್ನು ವಿಪ್ರ ಸಮ್ಮಾನ ನೀಡಿ ಗೌರವಿಸಲಾಯಿತು. ವಿವಿಧ ವಲಯದ ಸಾಧಕರು ಮತ್ತು ವಿಪ್ರವಾಣಿ ಸಂಚಿಕೆ ಪ್ರಾಯೋಜಕ ಡಾ.ಲಿಂಗಪ್ರಸಾದ್ ಮತ್ತು ಸ್ಮಿತಾ ದಂಪತಿಯನ್ನು ಸನ್ಮಾನಿಸಲಾಯಿತು.
ಹಿಂದೆ ರಾಜ ಮಹಾರಾಜರು ಬ್ರಾಹ್ಮಣರಿಗೆ ರಾಜಾಶ್ರಯ ನೀಡಿ ಪುರಸ್ಕರಿಸುತ್ತಿದ್ದರು. ಇಂದು ರಾಜರೇ ಇಲ್ಲದ್ದರಿಂದ ಬ್ರಾಹ್ಮಣರು ಅತಂತ್ರರಾಗಿದ್ದಾರೆ. ಬ್ರಾಹ್ಮಣರ ಹಿತಾಸಕ್ತಿಗಳಿಗೆ ವಿರುದ್ಧವಾದ ಸರ್ಕಾರಗಳು, ಹೊಸ ಕಾನೂನಿನಿಂದ ಕೈತಪ್ಪಿದ ಭೂಮಿ ಹಾಗೂ ಮೀಸಲಾತಿಗಳಿಂದ ಬ್ರಾಹ್ಮಣರು ಇಂದು ಅಲ್ಪ ಸಂಖ್ಯಾತರಾಗಿದ್ದಾರೆ. ಬ್ರಾಹ್ಮಣರು ಜಾತಿ ವ್ಯವಸ್ಥೆ ತಂದರು ಎಂಬ ಆಪಾದನೆಯಿದ್ದು, ವಾಸ್ತವವಾಗಿ ಜಾತಿ ವ್ಯವಸ್ಥೆಯಿಂದ ತೊಂದರೆಗೊಳಗಾದವರು ಬ್ರಾಹ್ಮಣರು. ಬ್ರಾಹ್ಮಣರು ಸ್ವಾಭಿಮಾನ, ಸಂಸ್ಕಾರ, ಜಾತ್ಯತೀತ ಮತ್ತು ರಾಜಕೀಯ ಶಕ್ತಿ ಗಳಿಸುವುದು ಅಗತ್ಯ. ಬ್ರಾಹ್ಮಣ ಎನ್ನುವುದು ಜಾತಿಯಾದರೆ ಬ್ರಾಹ್ಮಣ್ಯ ಎಂಬುದು ನೀತಿ. -ಡಾ.ಕೆ.ಪಿ.ಪುತ್ತೂರಾಯ, ವಿಶ್ರಾಂತ ನಿರ್ದೇಶಕ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ https://www.vijayavani.net/the-lorry-fell-into-the-road-drain https://www.vijayavani.net/young-woman-dies-after-falling-into-well