ಕೋಟ: ಬ್ರಾಹ್ಮಣರು ತಮ್ಮ ಸಂಸ್ಕಾರ ಉಳಿಸಿಕೊಳ್ಳಬೇಕು. ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜತೆಗೆ ಸಮಾಜಕ್ಕೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಉತ್ತಮ ಕಾರ್ಯವೆಸಗುತ್ತಿದೆ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಸಾಲಿಗ್ರಾಮಶ್ರೀ ದೇಗುಲದ ಸಭಾಂಗಣದಲ್ಲಿ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವಾರ್ಷಿಕ ಮಹಾಸಭೆ ಅಧಿವೇಶನದಲ್ಲಿ ಅವರು ಮಾತನಾಡಿದರು. ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಅಶೋಕ ಭಟ್ ಮಾತನಾಡಿ, ಪ್ರತಿಶತ ಮೂರರಷ್ಟಿರುವ ಬ್ರಾಹ್ಮಣ ಸಮುದಾಯ ಸಂಘಟಿತರಾಗದಿದ್ದರೆ ಮುಂದಿನ ದಿನಗಳಲ್ಲಿ ಸವಾಲು ಎದುರಿಸಲು ಕಷ್ಟವಾದೀತು. ಸಾಲಿಗ್ರಾಮ ವಲಯದ ಸಮಾಜಮುಖಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಲಿಗ್ರಾಮ ವಲಯ ಅಧ್ಯಕ್ಷ ಎಂ.ಶಿವರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿವೇತನ ವಿತರಣೆ
ಸಾಲಿಗ್ರಾಮ ಬ್ರಾಹ್ಮಣ ಮಹಾಸಭಾ ವ್ಯಾಪ್ತಿಯ 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ 2,50,000 ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು. ವಲಯದ 5 ಮಂದಿ ಅನಾರೋಗ್ಯ ಪೀಡಿತರಿಗೆ 50 ಸಾವಿರ ರೂ. ವೈದ್ಯಕೀಯ ನೆರವು ನೀಡಲಾಯಿತು. ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಿ.ಕೃಷ್ಣಮೂರ್ತಿ ಉರಾಳ, ಶಿಲ್ಪಕಲಾ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ ಎಚ್.ಜಿ.ಗಣೇಶ ಉರಾಳ ಅವರನ್ನು ಸನ್ಮಾನಿಸಲಾಯಿತು. ಶ್ರೀಪ್ರಿಯಾ ಪಿ., ಶ್ರೀಲಕ್ಷ್ಮೀ ಸೋಮಯಾಜಿ, ಅಕ್ಷಯ ಶಾಸ್ತ್ರಿ, ವಿಭುವನ ಹೇರಳೆ, ಅದ್ವೈತ ಉಪಾಧ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬ್ರಾಹ್ಮಣ ಮಹಾಸಭಾದ ಮುಖೇನ ವಲಯದ 8 ಮಂದಿ ಅನಾರೋಗ್ಯ ಪೀಡಿತರಿಗೆ, ಇಬ್ಬರು ವಿದ್ಯಾರ್ಥಿಗಳಿಗೆ ಒಟ್ಟು 1 ಲಕ್ಷ ರೂ. ಧನ ಸಹಾಯ ವಿತರಿಸಲಾಯಿತು. ಮಹಾಸಭೆ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಉಪಾಧ್ಯಕ್ಷ ಶ್ರೀ ಪಟ್ಟಾಭಿರಾಮ ಸೋಮಯಾಜಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ರಾಜಾರಾಮ ಐತಾಳ ಕಾರ್ಯಕ್ರಮ ನಿರೂಪಿಸಿದರು.
ಸುಬ್ರಹ್ಮಣ್ಯ ಹೇರಳೆ, ಸಿ.ಸುಬ್ರಾಯ ಉರಾಳ., ಪಿ.ಸಿ.ಹೊಳ್ಳ, ಕೃಷ್ಣ ಪ್ರಸಾದ ಹೇರಳೆ, ಮಹಾಬಲ ಹೇರಳೆ,ಲಕ್ಷ್ಮೀನಾರಾಯಣ ಅಡಿಗ, ವಿಪ್ರ ಮಹಿಳಾ ಸಾಲಿಗ್ರಾಮ ವಲಯ ವನಿತಾ ಉಪಾಧ್ಯ ಸಹಕರಿಸಿದರು.