ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ಸ್ಥಾಪನೆಯಾಗಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮದ ಅಂಗವಾಗಿ ಜ.18, 19ಕ್ಕೆ ಬ್ರಾಹ್ಮಣ ಮಹಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
ಸೋಮವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಕೆಬಿಎಂಎಸ್ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಕಾರ್ಯಕ್ರಮದ ಕುರಿತು ವಿವರ ನೀಡಿದರು.
ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಜ.17ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, 18 ಮತ್ತು 19ಕ್ಕೆ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ. ಜಗತ್ತಿನ ಕಲ್ಯಾಣದ ದೃಷ್ಠಿಯಿಂದ ‘ವಿಶ್ವಾಮಿತ್ರ’ ಎಂಬ ಧ್ಯೇಯ ವಾಕ್ಯದಡಿ ವಿವಿಧ ಪೂಜೆ, ಹೋಮ–ಹವನ, ಪಾರಾಯಣ–ಪಠಣ, ಭಜನೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಲರವ, ವಿಚಾರ ಗೋಷ್ಠಿ, ಸಮಾಜದ ಸಾಧಕರಿಗೆ ಗೌರವ ಸನ್ಮಾನ, ಬ್ಯುಸಿನೆಲ್ ಎನ್‌ಕ್ಲೇವ್, ವಸ್ತುಪ್ರದರ್ಶನ, ಪಾಣಿಗ್ರಹಣ ವೇದಿಕೆ, ಆಹಾರ ಮೇಳ, ವಾಣಿಜ್ಯ ಮೇಳ, ವಿವಿಧ ಕೃತಿ ಬಿಡುಗಡೆ ಹೀಗೆ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಸೇರಿ ಸ್ವರ್ಣವಲ್ಲಿ, ಶಿವಗಂಗಾ, ಮನ್ನೆಲೆಮಾವು, ಆವನಿ, ಶ್ರೀರಾಮಚಂದ್ರಾಪುರ, ಕಂಚಿಕಾಮಕೋಟಿ, ಮಂತ್ರಾಲಯ, ಹರಿಹರಪುರ, ಪೇಜಾವರ,ಯದುಗಿರಿ, ಸೋಸಲೆ, ಯಡನೀರು ಮತ್ತಿತರ ಮಠಗಳ ಶ್ರೀಗಳು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಡ್ನವೀಸ್, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ಮತ್ತಿತರ ನಾಯಕರು, ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ವಾಂಸರಾದ ಪಾವಗಡ ಪ್ರಕಾಶರಾವ್, ಹಿರಿಯ ಪುರೋಹಿತ ಭಾನುಪ್ರಕಾಶ ಶರ್ಮಾ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯಸಿಂಹ, ಮಹಾಸಭೆ ಉಪಾಧ್ಯಕ್ಷ ಛಾಯಾಪತಿ, ಕಾರ್ಯದರ್ಶಿ ಶ್ರೀಧರಮೂರ್ತಿ, ಮುಖಂಡರಾದ ಡಿ.ಎನ್.ನಾಯಕ್, ದಿವಾಕರ ಮತ್ತಿತರರಿದ್ದರು.
ಪೂಜೆ, ಪಾರಾಯಣ, ಹೋಮ, ವಿವಿಧ ಗೋಷ್ಠಿ
ಶುಕ್ರವಾರ ಸಂಜೆ ಶ್ರೀಗುರು ಪ್ರಾರ್ಥನೆ, ಗಣಪತಿ ಪೂಜೆ, ಗೋಪೂಜೆ, ಮಹಾ ಸಂಕಲ್ಪ, ಪುಣ್ಯಾಹವಾಚನ, ಗಾಯತ್ರಿ ಮಹಾಯಾಗ ಕಲಶ ಸ್ಥಾಪನೆ, ಗಾಯತ್ರೀ ಜಪ ಪ್ರಾರಂಭ.
ಶನಿವಾರ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಗಾಯಿತ್ರಿ ಮಹಾಯಾಗ ಆರಂಭ. 8.30ಕ್ಕೆ ಹೋಮದ ಪೂರ್ಣಾಹುತಿ. ನಂತರ ರಾಮ ತಾರಕ ಹೋಮ, ವೇದ ಪಾರಾಯಣ, ಭಗವದ್ಗೀತಾ ಪಠಣ, ಭಜನೆ. ಸಮ್ಮೇಳನದ ಉದ್ಘಾಟನೆ.
ಬೆಳಗ್ಗೆ 11.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ನಂತರ ನಾದ ಬ್ರಹ್ಮರಿಗೆ ನಮನ, ಬ್ರಹ್ಮತೇಜ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಭಾನುವಾರ ಬೆಳಗ್ಗೆ 10ಕ್ಕೆ ಸನಾತನ ಧರ್ಮಕ್ಕೆ ಆಚಾರ್ಯತ್ರಯರ ಕೊಡುಗೆ ಕುರಿತು ವಿಚಾರ ಗೋಷ್ಠಿ, 11.30ಕ್ಕೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 1ಕ್ಕೆ ವಿವಿಧ ಸಾಧಕರಿಗೆ ಗೌರವ ಸಮರ್ಪಣೆ, 3ಕ್ಕೆ ಧರ್ಮಸಭೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪರ್ಯಾಯ ವೇದಿಕೆಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ.
“ಸರ್ಕಾರ ಬಿಡುಗಡೆ ಮಾಡಲು ಹೊರಟಿರುವ ಜಾತಿಗಣತಿ ವರದಿ ಅವೈಜ್ಞಾನಿಕವಾಗಿದ್ದು, ಯಾರ ಮನೆಗೂ ಗಣತಿಗಾಗಿ ಯಾರೂ ಬಂದಿಲ್ಲ. ಆದ್ದರಿಂದ ವಸ್ತುನಿಷ್ಠವಾಗಿ ಸರ್ಕಾರ ಇನ್ನೊಮ್ಮೆ ಜಾತಿಗಣತಿ ಮಾಡಿ ನಂತರ ವರದಿ ಬಿಡುಗಡೆ ಮಾಡಬೇಕು.” –ಅಶೋಕ್ ಹಾರನಹಳ್ಳಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ
ಬ್ರಾಹ್ಮಣರಿಗೆ ಸಂವಿಧಾನ ಬದ್ಧವಾಗಿರುವ ಶೇ.10 ಮೀಸಲಾತಿಯನ್ನು ಸರ್ಕಾರ ಜಾರಿ ಮಾಡಬೇಕು. ಸಮಾಜದ ಎಲ್ಲ ಉತ್ತಮ ಕೆಲಸಗಳಲ್ಲಿ ಬ್ರಾಹ್ಮಣರ ಪಾತ್ರ ಇರುವುದನ್ನು ಅರಿತು, ವಿನಾ ಕಾರಣ ಬ್ರಾಹ್ಮಣ ಸಮುದಾಯವನ್ನು ದೂಷಿಸುವುದನ್ನು ಬಿಡಬೇಕು. ಹಾಗೂ ಬ್ರಾಹ್ಮಣ ಸಮುದಾಯದ ಎಲ್ಲ ಒಳಪಂಗಡಗಳವರು ಒಗ್ಗಟ್ಟಾಗಿರಬೇಕು. –ಪಾವಗಡ ಪ್ರಕಾಶರಾವ್, ಆಧ್ಯಾತ್ಮಿಕ ಚಿಂತಕ
ಮಹಾಕುಂಭದ ಪ್ರಯುಕ್ತ ಪ್ರಯಾಗದಲ್ಲಿ ಕಾಶೀ ಜಗದ್ಗುರುಗಳ ಅನುಷ್ಠಾನ; ಅಖಾಡಾಧೀಶ್ವರರಿಗೆ ಲಿಂಗದೀಕ್ಷೆ