ಅನ್ನಪೂರ್ಣೇಶ್ವರಿ ದೇವರ ಬ್ರಹ್ಮಕಲಶೋತ್ಸವ ಸಂಪನ್ನ

Ism_Annapurneswari
Published on

ಪುತ್ತೂರು ಗ್ರಾಮಾಂತರ: ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆದುಕೊಂಡು ಬರುತ್ತಿರುವ ಕ್ಷೇತ್ರವಾದ ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವರ ಪುನಃಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಗುರುವಾರ ಸಂಪನ್ನಗೊಂಡಿತು.

ಕ್ಷೇತ್ರದ ಧರ್ಮದರ್ಶಿ ಮತ್ತು ತಂತ್ರಿ ಕುಕ್ಕಾಡಿ ಪ್ರೀತಂ ಪುತ್ತೂರಾಯ ನೇತೃತ್ವದಲ್ಲಿ ಗುರುವಾರ ಗಣಪತಿ ಹವನ, ಬಳಿಕ ಮಕರ ಲಗ್ನ ಸುಮೂಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ, ಪ್ರತಿಷ್ಠಾಪನಾ ಬಲಿ, ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಮಂಗಳಮಂತ್ರಾಕ್ಷತೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಸಂಜೆ ದೇವರಿಗೆ ಮಹಾಪೂಜೆ, ದೇವರ ಬಲಿ ಹೊರಟ ಉತ್ಸವ, ಪಲ್ಲಕ್ಕಿ ಉತ್ಸವ, ಬಂಡಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ರಾತ್ರಿ ವಿಷ್ಣುಮೂರ್ತಿ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ರಾಜೇಶ್ ಬನ್ನೂರು, ಪ್ರಧಾನ ಕಾರ್ಯದರ್ಶಿ ಜಯಂತ ಶೆಟ್ಟಿ ಕಂಬಳತ್ತಡ್ಡ, ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಬೋರ್ಕರ್, ಕೋಶಾಧಿಕಾರಿ ಉದಯಕುಮಾರ್ ರೈ ಎಸ್., ಉಪಾಧ್ಯಕ್ಷ ಮಂಜಪ್ಪ ರೈ ಬಾರಿಕೆ, ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಸಹಿತ ಸಮಿತಿ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net