

ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತೆ ಹಾಗೂ 5 ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಅವರ 20 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಪತಿ ಕರುಂಗ್ ಒಂಕೋಲರ್ (ಒನ್ಲರ್) ಅವರಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಒನ್ಲರ್ 2022ರ ಮಣಿಪುರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಈ ವೇಳೆ ಅವರು ಪ್ರಚಾರಕ್ಕಾಗಿ 2&3 ಕೋಟಿ ರೂ. ಖರ್ಚು ಮಾಡಿದ್ದರು. ಈ ಅಪಾರ ನಷ್ಟದಿಂದ ಮೇರಿ ಕೋಮ್ ಸಿಟ್ಟಾಗಿದ್ದರಿಂದ, ದಂಪತಿಯ ನಡುವೆ ವಿರಸ ಮೂಡಿತ್ತು. ನಂತರದಲ್ಲಿ 42 ವರ್ಷದ ಮೇರಿ ಕೋಮ್ ತನ್ನ ನಾಲ್ವರು ಮಕ್ಕಳೊಂದಿಗೆ (3 ಗಂಡು, 1 ಹೆಣ್ಣು) ರಿದಾಬಾದ್ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಕುಟುಂಬದ ಮೂಲಗಳ ಪ್ರಕಾರ, ಒನ್ಲರ್ಗೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಇಷ್ಟವಿರಲಿಲ್ಲ. ಆದರೆ ಮಾಜಿ ರಾಜ್ಯಸಭಾ ಸದಸ್ಯೆ ಮೇರಿ ಕೋಮ್ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶಿಸಿದ್ದರು. ಚುನಾವಣೆಯ ಸೋಲಿನ ನಂತರ ದಂಪತಿಯ ನಡುವೆ ಈ ಹಿಂದೆ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೊಡ್ಡದಾದವು ಮತ್ತು ಅದು ಇಬ್ಬರು ಪ್ರತ್ಯೇಕವಾಗಿ ವಾಸಿಸುವಷ್ಟು ಗಂಭೀರ ಸ್ವರೂಪ ಪಡೆಯಿತು.
ಮೇರಿ ಕೋಮ್ ಈಗ ಬೇರೊಬ್ಬ ವ್ಯಕ್ತಿಯೊಂದಿಗೆ ನಂಟು ಕೂಡ ಹೊಂದಿದ್ದಾರೆ. ಆತ ಇನ್ನೋರ್ವ ಮಹಿಳಾ ಬಾಕ್ಸರ್ನ ಪತಿಯಾಗಿದ್ದಾನೆ ಮತ್ತು ಮೇರಿ ಕೋಮ್ ಫೌಂಡೇಷನ್ನ ಚೇರ್ಮನ್ ಕೂಡ ಆಗಿದ್ದಾನೆ. ಆತನನ್ನು ಮೇರಿ ಕೋಮ್ ತನ್ನ ಇತ್ತೀಚೆಗಿನ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಉದ್ಯಮ ಸಹವರ್ತಿ ಎಂದು ಕರೆದಿದ್ದಾರೆ ಮತ್ತು ಆತನ ಜತೆಯಲ್ಲೇ ಮಹಾಕುಂಭಕ್ಕೂ ಭೇಟಿ ನೀಡಿದ್ದರು ಎಂದು ಬಾಕ್ಸಿಂಗ್ ವಲಯದ ಮೂಲಗಳು ಮಾಹಿತಿ ನೀಡಿವೆ.
ಮೇರಿಕೋಮ್&ಒನ್ಲರ್ ದಂಪತಿ ವಿಚ್ಛೇದನಕ್ಕಾಗಿ ಇನ್ನೂ ಅಧಿಕೃತವಾಗಿ ಅರ್ಜಿ ಸಲ್ಲಿಸಿಲ್ಲ. ಇದರ ನಡುವೆ ಪತಿಗೆ ಮಕ್ಕಳನ್ನು ಭೇಟಿಯಾಗಲು ಮೇರಿ ಕೋಮ್ ಅವಕಾಶ ನೀಡುತ್ತಿಲ್ಲ. ಮೇರಿ ಬಾಕ್ಸಿಂಗ್ ವೃತ್ತೀಜಿವನದಲ್ಲಿ ಬಿಜಿಯಾಗಿದ್ದ ಸಮಯದಲ್ಲಿ ಒನ್ಲರ್ ತನ್ನ ುಟ್ಬಾಲ್ ವೃತ್ತೀಜಿವನವನ್ನು ತ್ಯಜಿಸಿ ಮಕ್ಕಳ ಆರೈಕೆಯ ಸಂಪೂರ್ಣ ಜವಾಬ್ದಾರಿ ನಿಭಾಯಿಸಿದ್ದರು. ಇದೀಗ ಮಕ್ಕಳ ಭೇಟಿ ಅವಕಾಶ ಸಿಗದೆ ಭಾರಿ ನೊಂದಿದ್ದಾರೆ ಎಂದು ಒನ್ಲರ್ ಆಪ್ತ ಮೂಲಗಳು ತಿಳಿಸಿವೆ.
2005ರಲ್ಲಿ ಮದುವೆಯಾಗಿದ್ದ ಮೇರಿ ಕೋಮ್-ಒನ್ಲರ್ಗೆ 2007ರಲ್ಲಿ ಅವಳಿ ಗಂಡು ಮಕ್ಕಳು ಜನಿಸಿದ್ದರು. 2013ರಲ್ಲಿ ಮತ್ತೋರ್ವ ಪುತ್ರ ಜನಿಸಿದ್ದ. ಬಳಿಕ ಹೆಣ್ಣು ಮಗು ಬೇಕೆಂಬ ಮೇರಿ ಆಸೆಯಂತೆ 2018ರಲ್ಲಿ ಹೆಣ್ಣು ಮಗುವೊಂದನ್ನು ದತ್ತು ಸ್ವೀಕರಿಸಿದ್ದರು. 2014ರಲ್ಲಿ ತೆರೆಕಂಡಿದ್ದ ಮೇರಿ ಕೋಮ್ ಜೀವನ ಆಧಾರಿತ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸಿದ್ದರು.