ಅನಿವಾರ್ಯತೆಗೆ ತಕ್ಕಂತೆ ಔದ್ಯಮಿಕ ಪ್ರಯೋಗ : ಡಾ.ಬಿ.ಎ.ಕುಮಾರ್ ಹೆಗ್ಡೆ ವಿಶ್ಲೇಷಣೆ

sdm
Published on

ಬೆಳ್ತಂಗಡಿ: ಜನರ ಸ್ವಭಾವ, ಸಾಮಾಜಿಕ ಅಗತ್ಯ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ನೂತನ ವಿಚಾರ ರೂಪಿಸುವ ಸಾಮರ್ಥ್ಯ ಔದ್ಯಮಿಕ ಪ್ರಯೋಗಶೀಲತೆಗೆ ಸಹಾಯಕವಾಗುತ್ತದೆ ಎಂದು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ್ ಹೆಗ್ಡೆ ಹೇಳಿದರು.

ಸೋಮವಾರ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿ.ವೋಕ್ ರೀಟೇಲ್ ಅಂಡ್ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ಬೂಟ್ ಕ್ಯಾಂಪ್ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರ ಕಂಡ ಎಲ್ಲ ಶ್ರೇಷ್ಠ ಉದ್ಯಮಿಗಳು ಆಯಾ ಕಾಲದ ಸಾಮಾಜಿಕ ಸ್ಥಿತಿಯನ್ನು ಅತ್ಯಂತ ಕೂಲಂಕಷವಾಗಿ ಗಮನಿಸಿದರು. ಜನರ ಸ್ವಭಾವ ಮತ್ತು ನಿರೀಕ್ಷೆಗಳಿಗೆ ತಕ್ಕಂತೆಯೇ ಔದ್ಯಮಿಕ ಪ್ರಯೋಗಗಳನ್ನು ಕೈಗೊಂಡು ಯಶಸ್ಸು ಸಾಧಿಸಿದರು. ನವೀನ ಮಾದರಿಯ ಉದ್ಯಮ ಸ್ಥಾಪಿಸುವವರು ಕುತೂಹಲದ ಗುಣ ಕಾಯ್ದುಕೊಳ್ಳಬೇಕು. ಸಾಮಾಜಿಕ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಎಂದರು.

ವಿದ್ಯಾರ್ಥಿಗಳು ಸ್ವತಃ ಸಿದ್ಧಪಡಿಸಿದ ಕರಕುಶಲ ವಸ್ತುಗಳು, ಆಹಾರ ಉತ್ಪನ್ನಗಳು, ಕಾರ್ಯಕ್ರಮಗಳ ನಿರ್ವಹಣೆ, ತಾಂತ್ರಿಕ ಸೇವೆಗಳು, ಹಣಕಾಸು ಸಲಹಾ ಸಂಸ್ಥೆಗಳು, ಟ್ರಾವೆಲಿಂಗ್ ಏಜೆನ್ಸಿ ಸೇರಿದಂತೆ ಹದಿನೈದು ವೈವಿಧ್ಯಮಯ ಸ್ಟಾರ್ಟಪ್‌ಗಳನ್ನು ಲೋಕಾರ್ಪಣೆ ಮಾಡಲಾಯಿತು.

ವಿಭಾಗದ ಮುಖ್ಯಸ್ಥ ಅಶ್ವಿತ್ ಎಚ್.ಆರ್. ಪ್ರಾಸ್ತಾವಿಕ ಮಾತನಾಡಿದರು. ಡೆಕ್ಕನ್ ಗ್ರೂಪ್ ಆಫ್ ಕಂಪನೀಸ್ ನಿರ್ದೇಶಕ ಮಹ್ಮದ್ ಬಾಷಿಲ್ ಖಾದರ್, ಉದ್ಯಮಗಳ ಅಭಿವೃದ್ಧಿ ಘಟಕದ ಸಂಯೋಜಕರಾದ ಸ್ವಾತಿ ಬಿ, ಸುಮನ್ ಜೈನ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಇಶಾ ಸ್ವಾಗತಿಸಿದರು. ಶಾಂಭವಿ ಅತಿಥಿಗಳನ್ನು ಪರಿಚಯಿಸಿದರು. ಅರ್ಚನಾ ವಂದಿಸಿದರು. ಅನುಷಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net