ಕಮಲಕ್ಕೆ ಬೂಸ್ಟರ್ ಡೋಸ್; ಪ್ರಧಾನಿ ಮೋದಿ ಭೇಟಿ, ವಿವಿಧ ಯೋಜನೆಗಳಿಗೆ ಶಿಲಾನ್ಯಾಸ

Yoga
ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಮೈಸೂರು ಅರಮನೆ ಎದುರು ಭಾನುವಾರ ನಡೆದ ತಾಲೀಮು.
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಮತ್ತು ಮೈಸೂರು ಭೇಟಿ ರಾಜ್ಯ ಬಿಜೆಪಿ ಪಾಲಿಗೆ ಬೂಸ್ಟರ್ ಡೋಸ್ ಆಗುವ ನಿರೀಕ್ಷೆ ಇದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮೋದಿ ಮೊದಲ ಬಾರಿಗೆ ರಾಜ್ಯಕ್ಕೆ ಬರುತ್ತಿದ್ದು, ರಾಜಕೀಯ ವಸ್ತುಸ್ಥಿತಿ ಕುರಿತು ‘ಗ್ರೌಂಡ್ ರಿಪೋರ್ಟ್’ ಪಡೆಯುವ ಸಾಧ್ಯತೆಗಳಿವೆ.

ಹೊಸ ಯೋಜನೆಗಳು, ಜನಪರ ಕಾರ್ಯಕ್ರಮಗಳ ಜಾರಿ ಮೂಲಕ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ರಾಜ್ಯ ನಾಯಕರು ಹೆಣಗಾಡುತ್ತಿದ್ದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. ಒಂದಿಲ್ಲೊಂದು ಆರೋಪಗಳು, ಹಿಜಾಬ್, ಪಠ್ಯಪುಸ್ತಕಗಳ ಪರಿಷ್ಕರಣೆ ಇತ್ಯಾದಿ ವಿವಾದಗಳು ತಡೆಗೋಡೆಯಾಗಿದ್ದು, ಮೋದಿ ಭೇಟಿ ಇವುಗಳನ್ನು ಸರಿಪಡಿಸಲಿದೆ ಎಂಬ ವಿಶ್ವಾಸ ಬಿಜೆಪಿ ನಾಯಕರಲ್ಲಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನಗಳ ಗೆಲುವಿನ ಖುಷಿಯನ್ನು ವಿಧಾನ ಪರಿಷತ್ ಚುನಾವಣೆ ಕಸಿದುಕೊಂಡಿದೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರಗಳ ಸೋಲಿನ ಕಹಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಲ್ಲೂ ಮರುಕಳಿಸಿದೆ. ಆಂತರಿಕ ಸಮಸ್ಯೆಗಳೇ ಹಿನ್ನಡೆಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ಮೋದಿ ಈ ಎಲ್ಲ ಅಂಶಗಳನ್ನು ಅವಲೋಕಿಸಲಿದ್ದು, ಕಾರ್ಯಕರ್ತರಲ್ಲೂ ಹುಮ್ಮಸ್ಸು ತುಂಬಲಿದೆ ಎನ್ನುವುದು ಸಂಘಟನೆಯ ಲೆಕ್ಕಾಚಾರವಾಗಿದೆ.

ಮುಖ್ಯ ಕಾರ್ಯದರ್ಶಿ ಪರಾಮರ್ಶೆ: ಕೊಮ್ಮಘಟ್ಟದಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭ ಸೇರಿ ಪ್ರಧಾನಿಯವರು ಪಾಲ್ಗೊಳ್ಳಲಿರುವ ಮೂರು ಕಾರ್ಯಕ್ರಮಗಳ ಸಿದ್ಧತೆಗಳ ಉನ್ನತಮಟ್ಟದ ಪರಿಶೀಲನಾ ಸಭೆ ಭಾನುವಾರ ನಡೆಯಿತು. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ವಿವಿಧ ಇಲಾಖೆಗಳ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿ, ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಜತೆಗೆ ಎಸ್​ಪಿಜಿ ಸೂಚನೆ ಪ್ರಕಾರ ಮಾಡಿರುವ ಏರ್ಪಾಟುಗಳನ್ನು ಪರಾಮಶಿಸಿದರು.

ನವೀನ್ ಪಾಲಕರಿಗೆ ಸಾಂತ್ವನ: ಯೂಕ್ರೇನ್ ಯುದ್ಧಭೂಮಿಯಲ್ಲಿ ಮಡಿದ ವೈದ್ಯ ವಿದ್ಯಾರ್ಥಿ ನವೀನ್ ಕುಟುಂಬಕ್ಕೆ ಮೋದಿ ಸಾಂತ್ವನ ಹೇಳಲಿದ್ದಾರೆ. ಪ್ರಧಾನಿ ಕಚೇರಿ ಸೂಚನೆಯಂತೆ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್, ತಾಯಿ ವಿಜಯಲಕ್ಷ್ಮಿ ಹಾಗೂ ಸೋದರ ಹರ್ಷ ಅವರನ್ನು ಒಂದು ದಿನ ಮುಂಚಿತವಾಗಿ ಬೊಮ್ಮಾಯಿ ಬೆಂಗಳೂರಿಗೆ ಕರೆಯಿಸಿಕೊಂಡಿದ್ದಾರೆ. ಜ್ಞಾನಭಾರತಿ ವಿವಿ ಆವರಣದಲ್ಲಿ ಈ ಭೇಟಿಗೆ 10 ನಿಮಿಷ ನಿಗದಿಯಾಗಿದೆ. ಅತ್ಯಂತ ಕ್ಲಿಷ್ಟಕರ ಸನ್ನಿವೇಶವಿದ್ದರೂ ವಾಗ್ದಾನದಂತೆ ಮೃತ ಮಗನ ಪಾರ್ಥಿವ ಶರೀರ ತವರಿಗೆ ತರಿಸಿ ಅಂತಿಮ ದರ್ಶನ, ಅಂತ್ಯಸಂಸ್ಕಾರ ನೆರವೇರಿಸಲು ಅವಕಾಶ ಕಲ್ಪಿಸಿದ ಮೋದಿಯವರಿಗೆ ಸಂತ್ರಸ್ತ ಕುಟುಂಬ ಕೃತಜ್ಞತೆ ಸಲ್ಲಿಸಲು ತುದಿಗಾಲಲ್ಲಿ ನಿಂತಿದ್ದು, ಅತಂತ್ರರಾಗಿರುವ ವೈದ್ಯ ವಿದ್ಯಾರ್ಥಿಗಳಿಗೆ ನೆರವಾಗಲು ಕೋರಬೇಕೆಂಬ ಉದಾತ್ತ ನಿಲುವು ಹೊಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ವಿಶ್ವ ಯೋಗ ದಿನಾಚರಣೆಯೇ ಮೋದಿಯವರ ಮುಖ್ಯ ಕಾರ್ಯಕ್ರಮ ವಾಗಿದ್ದು, ಅದರೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಅಭಿವೃದ್ಧಿ ಪಥದ ಯೋಗ: ಮೈಸೂರಿನಲ್ಲಿ ಆಯೋಜಿಸಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದು ಮೋದಿ ಭೇಟಿ ಮುಖ್ಯ ಉದ್ದೇಶವಾಗಿದ್ದು, ಅದರೊಂದಿಗೆ ಅಭಿವೃದ್ಧಿ ಪಥವನ್ನು ಜೋಡಿಸಿ ಬೆಂಗಳೂರು ಬ್ರಾಂಡ್​ಗೆ ಹೊಸ ಹೊಳಪು ನೀಡಲು ರಾಜ್ಯ ನಾಯಕತ್ವ ಮುಂದಾಗಿದೆ. ಬಹುಸಾವಿರ ಕೋಟಿ ರೂ.ಗಳ ಮೊತ್ತದ ಯೋಜನೆಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆಗಳೆಲ್ಲ ಬೆಂಗಳೂರು ಕೇಂದ್ರಿತವಾಗಿದ್ದು, ಮುಂಬರುವ ಬಿಬಿಎಂಪಿ ಚುನಾವಣೆ ದೃಷ್ಟಿಯಿಂದಲೂ ಹೆಚ್ಚಿನ ಅನುಕೂಲ ವಾಗಲಿದೆ ಎಂಬ ಆಶಯ ಆಡಳಿತ ಪಕ್ಷದ್ದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net