

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯಲ್ಲಿ ಕೊಂಕಣಿ ಭಾಷೆಗೆ ವಿಶೇಷ ಪ್ರೋತ್ಸಾಹವಿದೆ. ಈ ಭಾಷೆಯ ಕುರಿತು ಎಲ್ಲರಲ್ಲೂ ಪ್ರೀತಿಯಿದ್ದು ಸಮಾಜದಲ್ಲಿ ಹೆಚ್ಚು ಯುವ ಕೊಂಕಣಿ ಸಾಹಿತಿಗಳು ಉದಯಿಸಬೇಕಾಗಿದೆ. ಅದರಿಂದ ಕೊಂಕಣಿ ಭಾಷೆಯ ಬೆಳವಣಿಗೆ ಹಾಗೂ ಮುನ್ನೆಲೆಗೆ ಪೂರಕವಾಗಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧಮಾರ್ಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು.
ಉಡುಪಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ ಮತ್ತು ಬೆಳ್ಳೆ ವಿಶನ್ ಡಾಟ್ ಕಾಮ್ ಆಶ್ರಯದಲ್ಲಿ ಜುಲೈ 22ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಎವ್ಜಿನ್ ಡಿಸೋಜಾ ಮೂಡುಬೆಳ್ಳೆ ಅವರ ಮೋಗ್ ಆನಿಂ ಬಲಿದಾನ್ (ಪ್ರೀತಿ ಮತ್ತು ಬಲಿದಾನ) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ವಿಶನ್ ಕೊಂಕಣಿ ಸ್ಥಾಪಕ ಮೈಕಲ್ ಡಿಸೋಜಾ ಮಾತನಾಡಿ, ಎಂದಿಗೂ ನಾವು ಹೆತ್ತ ತಾಯಿ, ಹುಟ್ಟಿದ ಊರು ಮತ್ತು ಮಾತೃ ಭಾಷೆ ಮರೆಯಬಾರದು. ಎಲ್ಲರೂ ಮನೆಯಲ್ಲಿ ಮಕ್ಕಳಿಗೆ ಕೊಂಕಣಿ ಭಾಷೆ ಓದಲು ಉತ್ತೇಜಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನಿರಂತರ್ ಕೊಂಕಣಿ ಸಂಘಟನೆ ಉದ್ಯಾವರ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಚಲನಚಿತ್ರ ಪ್ರದರ್ಶನದ ಪೋಸ್ಟರ್ಅನ್ನು ಧಮಾರ್ಧ್ಯಕ್ಷರು ಬಿಡುಗಡೆ ಮಾಡಿದರು. ಬೆಳ್ಳೆ ವಿಶನ್ ಡಾಟ್ ಕಾಮ್ ಪ್ರವರ್ತಕ ಎಲಿಯಾಸ್ ಡಿಸೋಜಾ ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ ಸಂಚಾಲಕ ವಂ.ಡೆನಿಸ್ ಡೆಸಾ ಸ್ವಾಗತಿಸಿದರು. ಕಿಟಾಳ್ ಅಂತರ್ಜಾಲ ಮಾಧ್ಯಮದ ಸಂಪಾದಕ ಎಚ್.ಎಂ. ಪೆರ್ನಾಲ್ ಕಾರ್ಯಕ್ರಮ ನಿರೂಪಿಸಿದರು. ಕೃತಿಕಾರ ಡಾ.ಎವ್ಜಿನ್ ಡಿಸೋಜಾ ವಂದಿಸಿದರು.