ವ್ಯಕ್ತಿತ್ವ ವಿಕಾಸಗೊಳಿಸುವ ಪುಸ್ತಕ ಓದುವ ಹವ್ಯಾಸ: ಕವಯತ್ರಿ ಡಾ.ಲತಾ ರಾಜಶೇಖರ್ ಅಭಿಮತ

book festival mandya
Published on

ಮಂಡ್ಯ: ಪುಸ್ತಕ ಓದುವ ಅಭಿರುಚಿಯಿಂದ ಅಗಾಧ ಜ್ಞಾನ ಲಭಿಸುತ್ತದೆ. ಮಾತ್ರವಲ್ಲದೆ ಆಲೋಚನೆ ಮತ್ತು ವ್ಯಕ್ತಿತ್ವ ವಿಕಾಸದ ಜತೆಗೆ ಬದುಕು ಉತ್ಕೃಷ್ಟಗೊಳ್ಳುತ್ತದೆ ಎಂದು ಕವಯತ್ರಿ ಡಾ.ಲತಾ ರಾಜಶೇಖರ್ ಅಭಿಪ್ರಾಯಪಟ್ಟರು.

ನಗರದ ರೈತಬಂಧು ಮಂಡ್ಯ ಫೌಂಡೇಷನ್ ಸಭಾಂಗಣದಲ್ಲಿ ಪರಿಚಯ ಪ್ರಕಾಶನ, ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ, ಜಿಲ್ಲಾ ಯುವ ಬರಹಗಾರರ ಬಳಗ, ಭೂಮಿ ಬೆಳಗು ಸಾಂಸ್ಕೃತಿಕ ಸಂಘ, ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಮೂರು ದಿನ ‘ಪರಿಚಯ ಪುಸ್ತಕ ಹಬ್ಬ’ ಉದ್ಘಾಟಿಸಿ ಮಾತನಾಡಿದರು.

ಪ್ರತಿ ಉತ್ತಮ ಪುಸ್ತಕ ಒಬ್ಬ ಗುರುವಿಗೆ ಸಮಾನ. ಆದ್ದರಿಂದ ಪುಸ್ತಕ ಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು. ಜನರು ಮೊಬೈಲ್, ಟಿವಿಗೆ ಅಂಟಿಕೊಂಡ ಮೇಲೆ ಪುಸ್ತಕ ಓದುವ ಆಸಕ್ತಿ ಕಡಿಮೆಯಾಗಿದೆ. ಕನ್ನಡದಲ್ಲಿ ಪ್ರತಿನಿತ್ಯ ನೂರಾರು ಪುಸ್ತಕ ಪ್ರಕಟವಾಗುತ್ತಿವೆ. ಇವು ಓದುಗರಿಗೆ ತಲುಪಬೇಕು. ಈ ಮೂಲಕ ಪುಸ್ತಕ ಸಂಸ್ಕೃತಿ ಉಳಿಯಬೇಕು ಎಂದರು.

ಪುಸ್ತಕ ಹಬ್ಬ ನಡೆಯುವುದರಿಂದ ಓದುವ ಅಭಿರುಚಿ ಬೆಳೆಯುದಲ್ಲದೆ, ಮುದ್ರಣ ವೆಚ್ಚ ಮತ್ತು ಕಾಗದ ಬೆಲೆ ಹೆಚ್ಚಳದಿಂದ ಸಂಕಷ್ಟ ಸ್ಥಿತಿಯಲ್ಲಿರುವ ಪ್ರಕಾಶಕರಿಗೆ ಅನುಕೂಲವಾಗುತ್ತದೆ. ಪುಸ್ತಕೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಓದುಗರಿಗೆ ಉತ್ತಮ ಪುಸ್ತಕಗಳು ಸುಲಭವಾಗಿ ಲಭ್ಯವಾಗುತ್ತವೆ. ಆದ್ದರಿಂದ ಇಂತಹ ಪುಸ್ತಕ ಮಾರಾಟ ಹೆಚ್ಚಾಗಿ ನಡೆಯಲಿ ಎಂದು ಆಶಿಸಿದರು.

ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿ, ಜನರಲ್ಲಿ ಓದುವ ಹವ್ಯಾಸ ಇನ್ನೂ ಜೀವಂತವಾಗಿದೆ. ಆದರೆ, ಜನರ ಆಸಕ್ತಿಯ ಪುಸ್ತಕಗಳು ಅವರಿರುವ ಕಡೆ ಖರೀದಿಗೆ ಲಭ್ಯವಿಲ್ಲ. ಈ ದಿಕ್ಕಿನಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಆಯೋಜನೆಗೊಂಡರೆ ಲೇಖಕರು, ಪ್ರಕಾಶಕರು, ಓದುಗರಿಗೆ ತುಂಬ ಅನುಕೂಲವಾಗುತ್ತದೆ. ಪುಸ್ತಕ ಸಂಸ್ಕೃತಿ ಚಳವಳಿ ಸ್ವರೂಪ ಪಡೆಯುತ್ತದೆ ಎಂದರು.

ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಚಲನಚಿತ್ರ ನಿರ್ದೇಶಕ ಎಂ.ಜಿ.ವಿನಯಕುಮಾರ್, ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎನ್.ರಾಜೇಂದ್ರಸಿಂಗ್, ಪರಿಚಯ ಪ್ರಕಾಶನದ ಸಂಸ್ಥಾಪಕ ಎಂ.ಎನ್.ಶಿವಕುಮಾರ್, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಕೆ.ಪಿ.ಅರುಣಕುಮಾರಿ, ಯುವ ಕವಿ ಮೊಹಮ್ಮದ್ ಅಜರುದ್ದೀನ್, ಕಲಾವಿದ ನಾರಾಯಣಸ್ವಾಮಿ ಇತರರಿದ್ದರು.

ರಿಯಾಯಿತಿ ದರ: ನಗರದ ವಿ.ವಿ ರಸ್ತೆಯ ಎರಡನೆಯ ತಿರುವಿನಲ್ಲಿರುವ ರೈತಬಂಧು ಮಂಡ್ಯ ಫೌಂಡೇಷನ್ ಸಭಾಂಗಣದಲ್ಲಿ ನ.3ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಕನ್ನಡ ಸಾಹಿತ್ಯದ ವಿವಿಧ ಪ್ರಕಾರದ ಪುಸ್ತಕಗಳನ್ನು ಓದುಗರು ರಿಯಾಯಿತಿ ದರದಲ್ಲಿ ಖರೀದಿಸಬಹುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net