

ಪಟನಾ: ಬಿಹಾರದ ರಾಜಧಾನಿ ಪಟನಾದಲ್ಲಿರುವ ಜಯಪ್ರಕಾಶ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿ ಓರ್ವ ಕರೆ ಮಾಡಿದ್ದು ಏರ್ಪೋರ್ಟ್ನ ಆವರಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಶೋಧ ಕಾರ್ಯ ನಡೆಸಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ವಿಮಾನ ನಿಲ್ದಾಣದ ಆವರಣದಲ್ಲಿ ಬಾಂಬ್ಗಾಗಿ ತೀವ್ರ ಶೋಧ ನಡೆಸಿದ್ದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ಒಬ್ಬರು ಬೆಳ್ಳಗೆ 10:47ರ ಸುಮಾರಿಗೆ ಅನಾಮಧೇಯ ವ್ಯಕ್ತಿ ಒಬ್ಬ ಕರೆ ಮಾಡಿ ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿ ಕರೆ ಕಟ್ ಮಾಡಿದ್ದಾನೆ.
ನಾವು ಕೂಡಲೇ ಬಾಂಬ್ ನಿಷ್ಕ್ರಿಯ ದಳಕ್ಕೆ ತಿಳಿಸಿದ್ದೇವೆ ಮತ್ತು ಅವರು ಕಾರ್ಯಾಚರಣೆಯನ್ನು ಮಾಡುತ್ತಿದ್ದಾರೆ. ಬೆದರಿಕೆ ಕರೆ ಹಿನ್ನಲೆಯಲ್ಲಿ ವಿಮಾನಗಳ ಸೇವೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಮತ್ತು ಪೊಲೀಸರು ಕರೆ ಮಾಡಿದ ಆ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.