ವಿಟ್ಲ: ಸೇವಾ ಮನೋಭಾವದಿಂದ ಮಾಡಿದ ಕೆಲಸ ಕಾರ್ಯಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ. ೧೫ ವರ್ಷ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಅವಿರತವಾಗಿ ನಡೆದುಕೊಂಡು ಬಂದಿದೆ. ಕನಸಿನಲ್ಲಿ ಬಂದ ದೇವಿಯ ಆಜ್ಞೆಯಂತೆ ಕಷ್ಟನಷ್ಟಗಳನ್ನು ಲೆಕ್ಕಿಸದೆ ಮುಂದಿಟ್ಟ ಹೆಜ್ಜೆಯನ್ನು ಹಿಂದಿಟ್ಟಿಲ್ಲ. ಮಕ್ಕಳಿಂದ ಪ್ರಾರಂಭವಾಗಿ ಪ್ರತಿಯೊಬ್ಬರ ಶ್ರಮದಿಂದ ಮಹಾನ್ ಕಾರ್ಯ ಸಾಧ್ಯವಾಗಿದೆ ಎಂದು ಬೊಳ್ನಾಡು ಭಗವತೀ ಕ್ಷೇತ್ರ ಆಡಳಿತ ಮೊಕ್ತೇಸರ ಕೃಷ್ಣ ಎನ್. ಉಚ್ಚಿಲ್ ಹೇಳಿದರು.

ಎರುಂಬು ಸಿಂಹಮೂಲೆ ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋಳ್ಯೂರು ಸೀಮೆ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಜೆ.ಪಿ.ಮೊಗಸಾಲೆ ಮಾತನಾಡಿ, ಸಾವಿರ ಶಕ್ತಿಗಳು ಸೇರಿಕೊಂಡಿರುವ ಭಗವತೀ ದೇವಿ ಶಕ್ತಿಶಾಲಿಯಾಗಿದ್ದಾಳೆ. ಮಂತ್ರಗಳ ಮೂಲಕ ಸಾನ್ನಿಧ್ಯಕ್ಕೆ ಚೈತನ್ಯ ತುಂಬುವ ಕಾರ್ಯವಾಗುತ್ತದೆ. ನಿಸ್ವಾರ್ಥದಿಂದ ಮಾಡುವ ಕಾರ್ಯಗಳಿಂದ ಭಗವಂತನಿಗೆ ಪ್ರಿಯವಾಗಿರುತ್ತದೆ. ಕೃಷ್ಣ ಉಚ್ಚಿಲ ವ್ಯಕ್ತಿಯಾಗಿರದೆ ಶಕ್ತಿಯಾಗಿ ಬೆಳೆದಿದ್ದಾರೆ. ಕ್ಷೇತ್ರದ ಸಾನ್ನಿಧ್ಯ ವೃದ್ಧಿಗಾಗಿ ಪ್ರತಿಯೊಬ್ಬರೂ ಮನೆಯಲ್ಲಿ ದೇವಿಯ ಆರಾಧನೆ ಮಾಡಬೇಕು ಎಂದು ತಿಳಿಸಿದರು.
ಚಂದ್ರಿಕಾ ಕೃಷ್ಣ ಉಚ್ಚಿಲ್, ಮುಂಬೈ ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಾಡ, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಮುಂಬೈಯ ಲೆಕ್ಕ ಪರಿಶೋಧಕ ರಾಧೇಶ್ ನಾಯರ್, ಮುಂಬೈಯ ವೈದ್ಯ ಡಾ.ದಯಾನಂದ ಕುಂಬಳೆ, ಯತೀಂದ್ರನಾಥ ಪುತ್ತೂರು, ಉಪ್ಪಳ ಶ್ರೀ ಭಗವತೀ ಮುಂಬೈ ಸಮಿತಿ ಗುರಿಕಾರ ತಿಮ್ಮಪ್ಪ ಬಂಗೇರ, ಕೋಶಾಽಕಾರಿ ರಮೇಶ್ ಉಳ್ಳಾಲ, ಈಶ್ವರ ಐಲ, ಮುಂಬೈ ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ ಉಳ್ಳಾಲ, ಉಪಾಧ್ಯಕ್ಷೆ ಪ್ರೀತಿ ಮಂಜೇಶ್ವರ, ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಪ್ರಭಾ ಶೈಲೇಶ್, ಹಣಕಾಸು ಅಽಕಾರಿ ಸವಿತಾ ಶೆಟ್ಟಿ, ಉದ್ಯಮಿ ಸುಶಾಂತ್ ಸಬರ್, ಸ್ಥಳೀಯ ನಿವಾಸಿ ಜಗಜ್ಜೀವನ್ ರಾಮ್ ಶೆಟ್ಟಿ ಉಪಸ್ಥಿತರಿದ್ದರು.
ಭಜನಾ ಸಂಘದ ಅಧ್ಯಕ್ಷ ಮಾಧವ ಬಂಗೇರ ಕೇಪುಳಗುಡ್ಡೆ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಗಂಗಾಧರ ಬನಾರಿ ಸ್ವಾಗತಿಸಿದರು. ಮಾಲತಿ, ಜಯಂತಿ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಶ್ರೀಧರ ಕೆ. ವಂದಿಸಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ
ಉಪ್ಪಳ ಕ್ಷೇತ್ರದ ಗೋಪಾಲ ಬೆಳ್ಳಪ್ಪಾಡ ಮೂಡಾಯಿಬೆಟ್ಟು, ಕನಿಲ ಭಗವತೀ ಕ್ಷೇತ್ರದ ಗೋಪಾಲದಾಸ ಯಾನೇ ಕಣ್ಣ ಕಲೆಕಾರ್, ಉದ್ಯಮಿ ಉಮೇಶ್ ಬೆಂಜನಪದವು, ಕರಾಟೆ ತರಬೇತುದಾರ ಮಾಧವ ಸಿಂಹಮೂಲೆ, ಕನಿಲ ಭಗವತಿ ಕ್ಷೇತ್ರದ ಸತೀಶ, ರೈಲು ಅವಘಡ ತಪ್ಪಿಸಿದ ಚಂದ್ರಾವತಿ, ಸಮಾಜ ಸೇವಕ ಬಾಬು ಪಿಲಾರ್, ಯೋಗಪಟು ಅಶ್ವಿಜ, ಹೆಬ್ಬಾವಿನಿಂದ ರಕ್ಷಣೆ ಮಾಡಿದ ವೈಶಾಖ್, ಅಂತಾರಾಷ್ಟ್ರೀಯ ಕ್ರೀಡಾಪಟು ಅಮನ್ ರಾಜ್, ಕ್ರೀಡಾಪಟು ಹರಿಪ್ರಿಯಾ, ಆದಿದೇವ್, ಸೀತಕ್ಕ ಅವರನ್ನು ಸನ್ಮಾನಿಸಲಾಯಿತು. ಸ್ಥಳ ಒದಗಿಸಿಕೊಟ್ಟ ಜಗಜ್ಜೀವನ್ ರಾಮ್ ಶೆಟ್ಟಿ, ದಿವಾಕರ ಭಂಡಾರಿ, ೧೭ ಭಗವತೀ ಕ್ಷೇತ್ರಗಳ ಮೂಪತಿಯರುಗಳನ್ನು ಗೌರವಿಸಲಾಯಿತು.