

ನಿರ್ದೇಶಕರಾದ ರಾಜ್-ಡಿಕೆ ಆ್ಯಕ್ಷನ್-ಕಟ್ ಹೇಳಿದ್ದ, ಶಾಹಿದ್ ಕಪೂರ್, ವಿಜಯ್ ಸೇತುಪತಿ, ರಾಶಿ ಖನ್ನಾ ಮುಖ್ಯಭೂಮಿಕೆಯಲ್ಲಿದ್ದ ‘ಫರ್ಜಿ’ (2023) ವೆಬ್ ಸರಣಿ ಯಶಸ್ವಿಯಾಗಿತ್ತು. ಎಂಟು ಎಪಿಸೋಡ್‌ಗಳಲ್ಲಿ ಮೂಡಿಬಂದಿದ್ದ ಈ ಸರಣಿ ಯಶಸ್ವಿ ಬೆನ್ನಲ್ಲೇ ಚಿತ್ರತಂಡ ಸೀಕ್ವೆಲ್ ಘೋಷಿಸಿತ್ತು. ಈಗಾಗಲೇ ಸೀಕ್ವೆಲ್‌ನ ಶೂಟಿಂಗ್ ಆರಂಭವಾಗಿದೆ. ಇತ್ತೀಚೆಗಷ್ಟೇ ನಟಿ ಕುಬ್ರಾ ಶೇಟ್ ಚಿತ್ರತಂಡ ಸೇರಿಕೊಂಡಿರುವ ಬಗ್ಗೆ ವರದಿಯಾಗಿತ್ತು. ಅದರ ಬೆನ್ನಲ್ಲೇ ಚಿತ್ರತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಮೊದಲ ಸೀಸನ್‌ನಲ್ಲಿ ಮೇಘಾ ಪಾತ್ರ ನಿರ್ವಹಿಸಿದ್ದ ನಟಿ ರಾಶಿ ಖನ್ನಾ ಸೀಸನ್ ಎರಡರಿಂದ ಹೊರಗುಳಿದಿದ್ದಾರೆ. ರಾಶಿ ಬದಲಾಗಿ ಹೊಸ ನಾಯಕಿಯ ಆಗಮನವಾಗಿದ್ದು, ತಮಿಳಿನ ‘ಮಾರ್ಕೋ’, ತೆಲುಗಿನ ‘ಕೆಜೆಕ್ಯೂ: ಕಿಂಗ್ ಜಾಕಿ ಕ್ವೀನ್’ ನಟಿ ಯುಕ್ತಿ ತರೇಜಾ ‘ಫರ್ಜಿ 2’ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸ್ವತಃ ಅದನ್ನು ಯುಕ್ತಿಯೇ ಖಚಿತಪಡಿಸಿದ್ದು, ‘‘ಫರ್ಜಿ’ ಸೀಸನ್2ನಲ್ಲಿ ನಾನು ಶಾಹಿದ್ ಕಪೂರ್‌ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದೇನೆ. ಯಾವುದಕ್ಕೂ ಅಂಜದ, ಅಳುಕದ ಇಂದಿನ ಜೆನ್ ಜಿ ಹುಡುಗಿ ಪಾತ್ರದಲ್ಲಿದ್ದೇನೆ. ಈಗಾಗಲೇ ಶೇ.80ರಷ್ಟು ನನ್ನ ಭಾಗದ ಶೂಟಿಂಗ್ ಪೂರ್ಣಗೊಂಡಿದೆ. ಮಂದಿನ ವರ್ಷದ ಮಧ್ಯಂತರದಲ್ಲಿ ಫ‘ರ್ಜಿ 2’ ಸೀಸನ್ ನಿರೀಕ್ಷಿಸಬಹುದು’ ಎಂದು ಹೇಳಿಕೊಂಡಿದ್ದಾರೆ. ಈಗಷ್ಟೇ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಣ್ಣುಬಿಡುತ್ತಿರುವ ಯುಕ್ತಿಗೆ ಬಾಲಿವುಡ್‌ನಲ್ಲಿ ಮಹತ್ವದ ಚಿತ್ರಕ್ಕೆ ಅವಕಾಶ ದೊರೆತಿದೆ. -ಏಜೆನ್ಸೀಸ್