ಒಂದೇ ಒಂದು ಪಾತ್ರ, ಗಡಿಯಾಚೆ ನಡುಕ! ಪಾಕ್ ರಾಜಕಾರಣಿ ನಬೀಲ್ ಗಬೋಲ್ ಪಾಲಿಗೆ 'ಧುರಂಧರ್ 2' ವಿಲನ್ ಆಯ್ತಾ? | Dhurandhar2

Dhurandhar2
Dhurandhar2
Published on
ಮುಂಬೈ: ಬೆಳ್ಳಿತೆರೆಯ ಕಲ್ಪಿತ ಕಥೆಗಳು ಕೆಲವೊಮ್ಮೆ ನಿಜ ಜೀವನದ ವ್ಯಕ್ತಿಗಳ ನಿದ್ದೆಗೆಡಿಸುತ್ತವೆ ಎಂಬುದಕ್ಕೆ ಈಗ 'ಧುರಂಧರ್ 2' (Dhurandhar 2) ಚಿತ್ರವೇ ಸಾಕ್ಷಿ.
ಹೌದು, ಬಾಕ್ಸ್ ಆಫೀಸ್‌ನಲ್ಲಿ ಕೇವಲ ನಾಲ್ಕೇ ದಿನಗಳಲ್ಲಿ 700 ಕೋಟಿ ರೂಪಾಯಿ ಲೂಟಿ ಮಾಡಿರುವ ಈ ಸ್ಪೈ ಥ್ರಿಲ್ಲರ್, ಈಗ ಗಡಿಯಾಚೆಗಿನ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಚಿತ್ರದ 'ಜಮೀಲ್ ಜಮಾಲಿ' ಎಂಬ ಪಾತ್ರವು ತನ್ನನ್ನು ಹೋಲುತ್ತಿದೆ ಎಂದು ಪಾಕಿಸ್ತಾನದ ಪ್ರಭಾವಿ ರಾಜಕಾರಣಿ ನಬೀಲ್ ಗಬೋಲ್ (Nabil Gabol) ಈಗ ಆತಂಕಕ್ಕೆ ಒಳಗಾಗಿದ್ದಾರೆ.

ಯಾರು ಈ ನಬೀಲ್ ಗಬೋಲ್?

ನಬೀಲ್ ಗಬೋಲ್ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ಯ ಕರಾಚಿ ಮೂಲದ ಒಬ್ಬ ಉಗ್ರ ನಾಯಕ. ದಶಕಗಳಿಂದ ಕರಾಚಿಯ ಅತ್ಯಂತ ಅಪಾಯಕಾರಿ ಪ್ರದೇಶವೆಂದೇ ಕರೆಸಿಕೊಳ್ಳುವ 'ಲಿಯಾರಿ'ಯನ್ನು ಪ್ರತಿನಿಧಿಸುತ್ತಿರುವ ಇವರು, ಪಾಕಿಸ್ತಾನ ರಾಜಕಾರಣದ ಏರಿಳಿತಗಳನ್ನು ಕಂಡವರು. 20 ವರ್ಷಗಳ ಕಾಲ ಪಿಪಿಪಿಯಲ್ಲಿದ್ದ ಇವರು, ನಂತರ ಎಂಕ್ಯೂಎಂ (MQM) ಸೇರಿ ಮತ್ತೆ 2017ರಲ್ಲಿ ತಮ್ಮ ಮಗನೊಂದಿಗೆ ಸ್ವಪಕ್ಷಕ್ಕೆ ಮರಳಿದ್ದರು. ಇತ್ತೀಚಿನವರೆಗೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ, ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುತ್ತಿದ್ದ ಗಬೋಲ್, 'ಧುರಂಧರ್ 2' ಬಿಡುಗಡೆಯಾದ ನಂತರ ದಿಕ್ಕಾಪಾಲಾಗಿದ್ದಾರೆ.

'ಭಾರತೀಯ ಗೂಢಚಾರ'ನ ನೆರಳು?

'ಧುರಂಧರ್ 2' ಚಿತ್ರದಲ್ಲಿ ರಾಕೇಶ್ ಬೇಡಿ ನಿರ್ವಹಿಸಿರುವ 'ಜಮೀಲ್ ಜಮಾಲಿ' ಎಂಬ ಪಾತ್ರವು ನಬೀಲ್ ಗಬೋಲ್ ಅವರನ್ನೇ ಹೋಲುತ್ತದೆ ಎಂಬುದು ನೆಟ್ಟಿಗರ ವಾದ. ಆದರೆ, ಕಥೆಯಲ್ಲಿ ಇರುವ ಒಂದು ಅಚ್ಚರಿಯ ತಿರುವು ಗಬೋಲ್ ಅವರನ್ನು ಭಯಭೀತರನ್ನಾಗಿಸಿದೆ. ಚಿತ್ರದ ಜಮಾಲಿ ಪಾತ್ರವು ವಾಸ್ತವವಾಗಿ ಒಬ್ಬ 'ಭಾರತೀಯ ಗೂಢಚಾರ' (Indian Spy) ಎಂದು ತೋರಿಸಲಾಗಿದೆ. ಈ ವಿಚಾರ ಹೊರಬರುತ್ತಿದ್ದಂತೆ, ಪಾಕಿಸ್ತಾನದ ಒಳಗಡೆಯೇ ಗಬೋಲ್ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದೆ.
"ಇಷ್ಟು ದಿನ ಮಿನುಗುತ್ತಿದ್ದ ಗಬೋಲ್, ಈಗ ಪೂರ್ಣ ಪ್ಯಾನಿಕ್ ಮೋಡ್‌ಗೆ ಹೋಗಿದ್ದಾರೆ," ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, "ಪಾಕಿಸ್ತಾನ ಸೈನ್ಯ ಇವರನ್ನು ಎತ್ತಿಕೊಂಡು ಹೋದರೂ ಆಶ್ಚರ್ಯವಿಲ್ಲ" ಎಂಬ ವ್ಯಂಗ್ಯದ ಮಾತುಗಳು ಕೇಳಿಬರುತ್ತಿವೆ.

ರಾಕೇಶ್ ಬೇಡಿ ನೀಡಿದ ಖಡಕ್ ಸ್ಪಷ್ಟನೆ

ಈ ವಿವಾದದ ಬಗ್ಗೆ 'ಇಂಡಿಯಾ ಟುಡೇ' ಜೊತೆ ಮಾತನಾಡಿದ ಹಿರಿಯ ನಟ ರಾಕೇಶ್ ಬೇಡಿ, "ನಾನು ನಬೀಲ್ ಗಬೋಲ್ ಅವರನ್ನು ನೋಡಿ ಈ ಪಾತ್ರ ಮಾಡಿಲ್ಲ. ಅವರು ಯಾಕೆ ಆ ಪಾತ್ರದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೋ ನನಗೆ ತಿಳಿಯುತ್ತಿಲ್ಲ. ಚಿತ್ರಕ್ಕಾಗಿ ನಾನು ಒಂದು ನಿರ್ದಿಷ್ಟ ನೋಟವನ್ನು ಅಳವಡಿಸಿಕೊಂಡಿದ್ದೆ ಅಷ್ಟೇ. ವಿಗ್ ಮತ್ತು ಸ್ಟೈಲಿಂಗ್‌ನಿಂದಾಗಿ ಸ್ವಲ್ಪ ಹೋಲಿಕೆ ಇರಬಹುದು, ಅದು ನನ್ನ ತಪ್ಪಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

ಗಬೋಲ್ ಹತಾಶೆ ಮತ್ತು ಲಿಯಾರಿ ವಿವಾದ

ಈ ಬೆಳವಣಿಗೆಯಿಂದ ಕೆರಳಿರುವ ನಬೀಲ್ ಗಬೋಲ್, ಚಿತ್ರವು ಲಿಯಾರಿಯ ಗ್ಯಾಂಗ್ ಹಿಂಸಾಚಾರವನ್ನು ಅತಿಯಾಗಿ ಬಿಂಬಿಸಿದೆ ಎಂದು ಟೀಕಿಸಿದ್ದಾರೆ. "ಈಗ ಲಿಯಾರಿ ಸುರಕ್ಷಿತವಾಗಿದೆ, ಚಿತ್ರವು ವಿಕೃತ ದೃಷ್ಟಿಕೋನವನ್ನು ಹರಡುತ್ತಿದೆ," ಎಂದು ಅವರು ಕಿಡಿಕಾರಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಈ ಚಿತ್ರ ನಿಷೇಧಕ್ಕೊಳಗಾಗಿರುವುದಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ. ವಿಡಿಯೋವೊಂದರಲ್ಲಿ ತಮ್ಮ ಹತಾಶೆ ಹೊರಹಾಕಿರುವ ಅವರು, "ಜಮಾಲಿ ಪಾತ್ರಕ್ಕೂ ನನಗೂ ಸಂಬಂಧವಿಲ್ಲ," ಎಂದು ಪದೇ ಪದೇ ಹೇಳುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net