‘ದ ತಾಷ್ಕೆಂಟ್ ಫೈಲ್ಸ್’, ‘ದ ಕಾಶ್ಮೀರ್ ಫೈಲ್ಸ್’, ‘ದ ಬೆಂಗಾಲ್ ಫೈಲ್ಸ್’ನಂತಹ ನೈಜ ಘಟನೆಯಾಧಾರಿತ ಚಿತ್ರಗಳನ್ನೇ ನಿರ್ದೇಶಿಸಿ, ಪ್ರಸಿದ್ಧಿಯಾದವರು ವಿವೇಕ್ ರಂಜನ್ ಅಗ್ನಿಹೋತ್ರಿ. ಇಂತಹ ನಿರ್ದೇಶಕ ಮತ್ತೊಂದು ನೈಜ ಘಟನೆಯಾಧಾರಿತ ಸಿನಿಮಾ ಮಾಡಲಿದ್ದಾರೆ ಎಂಬ ಚರ್ಚೆ ಬಾಲಿವುಡ್‌ನಲ್ಲಿತ್ತು. ಅದರಲ್ಲೂ ವಿವೇಕ್ ಅಗ್ನಿಹೋತ್ರಿ ಈ ಬಾರಿ, ಭಾರತೀಯ ಸೈನಿಕರು, ಪಾಕಿಸ್ತಾನದ ವಿರುದ್ಧ ಕೈಗೊಂಡಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನೇ ತೆರೆ ಮೇಲೆ ತರಲು ನಿರ್ಧರಿಸಿದ್ದು, ಅದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಆ ಸುದ್ದಿ ಖಚಿತವಾಗಿದ್ದು, ಟಿ-ಸೀರಿಸ್ ನಿರ್ಮಾಣ ಸಂಸ್ಥೆಯು ವಿವೇಕ್ ಜತೆ ಕೈಜೋಡಿಸಿದ್ದು ಸಿನಿಮಾವನ್ನು ಘೋಷಿಸಿದೆ. ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ‘ಟೈನಿ’ ಧಿಲ್ಲಾನ್ ರಚಿಸಿರುವ ‘ಆಪರೇಷನ್ ಸಿಂಧೂರ್: ದ ಅನ್‌ಟೋಲ್ಡ್ ಸ್ಟೋರಿ ಆಫ್ ಇಂಡಿಯಾಸ್ ಡೀಪ್ ಸ್ಟೈಕ್ಸ್ ಇನ್‌ಸೈಡ್ ಪಾಕಿಸ್ತಾನ್’ ಕೃತಿಯಾಧಾರಿಸಿ, ಸಿನಿಮಾ ಮಾಡಲಾಗುತ್ತಿದೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಆರಂಭಗೊಂಡಿವೆ. ಚಿತ್ರದ ಬಗ್ಗೆ ವಿವೇಕ್ ಅಗ್ನಿಹೋತ್ರಿ, ‘ಇದು ಕೇವಲ ಚಿತ್ರವಲ್ಲ, ಸತ್ಯವನ್ನು ಹೇಳುತ್ತದೆ. ’ಆಪರೇಷನ್ ಸಿಂಧೂರ’ ಕೇವಲ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಪ್ರತೀಕಾರವಲ್ಲ, ಬದಲಾಗಿ, ಭಾರತ ತನ್ನ ಯುದ್ಧದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದೆ. ಇದಕ್ಕಾಗಿ ನಾನು ಮತ್ತು ತಂಡ ಆಳವಾಗಿ ಅಧ್ಯಯನ ನಡೆಸಿದ್ದೇವೆ. ವಿವಿಧ ಸೇನೆಗಳ ಮುಖಂಡರನ್ನು ಭೇಟಿ ಮಾಡಿ, ಏನೆಲ್ಲಾ ಘಟನೆಗಳು ನಡೆದವು ಎಂಬುದನ್ನು ತಿಳಿದುಕೊಂಡಿದ್ದೇವೆ’ ಎಂದಿದ್ದಾರೆ. -ಏಜೆನ್ಸೀಸ್