ಸಿನಿಮಾ ಸ್ಟಾರ್ಗಳ ಮಕ್ಕಳೂ ಚಿತ್ರರಂಗದಲ್ಲಿಯೇ ಬಿಜಿಯಾಗಿರುವ ಹಲವು ಉದಾಹರಣೆಗಳಿವೆ. ರಣಬೀರ್ ಕಪೂರ್, ಕರೀನಾ ಕಪೂರ್, ವರುಣ್ ಧವನ್, ಅನನ್ಯಾ ಪಾಂಡೆ, ಜಾಹ್ನವಿ ಕಪೂರ್, ಆರ್ಯನ್ ಖಾನ್, ಜುನೈದ್ ಖಾನ್, ಸುಹಾನಾ ಖಾನ್... ಹೀಗೆ ದೊಡ್ಡ ಲಿಸ್ಟ್ ಇದೆ. ಆದರೆ, ಕೆಲ ಸ್ಟಾರ್ಗಳ ಮಕ್ಕಳು ಚಿತ್ರರಂಗಕ್ಕೆ ಬಾರದೇ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಂಡಿರುವ ಉದಾಹರಣೆಗಳೂ ಇವೆ. ನವ್ಯಾ ನವೇಲಿ ನಂದಾ, ತ್ರಿಷಲಾ ದತ್, ಐರಾ ಖಾನ್, ಅನ್ಶುಲಾ ಕಪೂರ್, ರಿಯಾ ಕಪೂರ್... ಸೇರಿ ಕೆಲ ಬಾಲಿವುಡ್ ಸ್ಟಾರ್ ಮಕ್ಕಳು ಚಿತ್ರರಂಗದಿಂದ ದೂರವಿದ್ದಾರೆ. ಇದೀಗ ಆ ಸಾಲಿಗೆ ನಟ ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ಹೊಸದಾಗಿ ಸೇರಿಕೊಂಡಿದ್ದಾರೆ. ಹೌದು, ಈ ಬಗ್ಗೆ ಖುದ್ದು ಅಕ್ಷಯ್ ಕುಮಾರ್ ಹೇಳಿಕೊಂಡಿದ್ದು, "ಅವನಿಗೆ ಸಿನಿಮಾಗೆ ಬರಲು ಇಷ್ಟವಿಲ್ಲ. ಆ ಯೋಚನೆಯನ್ನೇ ಆತ ಮಾಡಿಲ್ಲ. ಅವನಿಗೆ ಫ್ಯಾಷನ್ ಇಂಡಸ್ಟ್ರಿ ಬಗ್ಗೆ ಹೆಚ್ಚು ಆಸಕ್ತಿ ಇದೆ. ಹೀಗಾಗಿ ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ₹4,500 ಸಂಬಳ ಕೂಡ ಪಡೆಯುತ್ತಿದ್ದಾರೆ. ಅದು ಒಳ್ಳೆಯದೇ ಅಲ್ಲವೇ? ಇತ್ತೀಚಿನ ದಿನಗಳಲ್ಲಿ ಅವನು ಹಳ್ಳಿಗಳಿಗೆ ತೆರಳಿ ಅಲ್ಲಿನ ಜನ ಧರಿಸುವ ಬಟ್ಟೆ, ಪ್ರಿಂಟ್ಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾನೆ. ನನ್ನಂತೆಯೇ ಆವನೂ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ವಹಿಸುತ್ತಾನೆ. ನನ್ನ ಮಗನನ್ನೂ ಸೇರಿ ನಾನು ಯಾರಿಗೂ ಲೆಕ್ಚರ್ ಮಾಡುವುದಿಲ್ಲ. ಯಾರನ್ನೂ ನೋಯಿಸಬೇಡ, ಯಾರಿಗೂ ತೊಂದರೆ ಕೊಡಬೇಡ ಅಂತಷ್ಟೇ ಹೇಳಿದ್ದೇನೆ. ಉಳಿದಂತೆ ಅವನ ಜೀವನ ಅವನದು' ಎಂದು ಮಾಹಿತಿ ನೀಡಿದ್ದಾರೆ. ಅಂದಹಾಗೆ, ಬಾಲಿವುಡ್ನ ಶ್ರೀಮಂತ ನಟರಲ್ಲಿ ಒಬ್ಬರಾದ ಅಕ್ಷಯ್ ಆಸ್ತಿ ₹2,500 ಕೋಟಿಗೂ ಹೆಚ್ಚು!