ಬಾಲಿವುಡ್​ ನಂತಹ ಜಾತ್ಯಾತೀತ ಸ್ಥಳ ಇನ್ನೊಂದಿಲ್ಲ: ಎ.ಆರ್. ರೆಹಮಾನ್ 'ಕೋಮು' ಹೇಳಿಕೆಗೆ ರಾಣಿ ಮುಖರ್ಜಿ ತಿರುಗೇಟು! Rani Mukerji

 ಬಾಲಿವುಡ್​ ನಟಿ ರಾಣಿ ಮುಖರ್ಜಿ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್
ಬಾಲಿವುಡ್​ ನಟಿ ರಾಣಿ ಮುಖರ್ಜಿ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ನಲ್ಲಿ ಕೋಮುಭಾವನೆ ಹೆಚ್ಚುತ್ತಿದೆ ಎಂದ ಎ.ಆರ್​. ರೆಹಮಾನ್​
  • ಮೂವತ್ತು ವರ್ಷದಿಂದ ನಾನು ಬಾಲಿವುಡ್​ನಲ್ಲಿದ್ದೆನೆ
  • ಬಾಲಿವುಡ್​​ ನಂತಹ ಜಾತ್ಯಾತೀತ ಸ್ಥಳ ಮತ್ತೊಂದಿಲ್ಲ
  • ನಿಮ್ಮಲ್ಲಿ ಪ್ರತಿಭೆ ಇದ್ದರೆ ನಿಮ್ಮನ್ನು ಯಾರು ತಡೆಯಲು ಸಾಧ್ಯವಿಲ್ಲ
ಮುಂಬೈ: ಬಾಲಿವುಡ್‌ನಲ್ಲಿ ಹೆಚ್ಚುತ್ತಿರುವ ಕೋಮು ಪಕ್ಷಪಾತದಿಂದ ನನಗೆ ಅವಕಾಶಗಳು ಕಡಿಮೆ ದೊರೆಯುತ್ತದೆ ಎಂದು ಆಸ್ಕರ್​ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ನೀಡಿದ ಹೇಳಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇವರ ಈ ಹೇಳಿಕೆ ಕೆಲವರಿಗೆ ಹೌದೆನಿಸಿದರೆ, ಹಲವರು ರೆಹಮಾನ್​ ಅವರನ್ನು ತರಾಟೆಗೆ ತೆಗೆದುಕೊಂಡರು.
ಈದೀಗ ಎ.ಆರ್. ರೆಹಮಾನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್​ ಖ್ಯಾತ ನಟಿ ರಾಣಿ ಮುಖರ್ಜಿ(Rani Mukerji), ನಾನು ರೆಹಮಾನ್​ ಅವರ ಹೇಳಿಕೆಯನ್ನು ಒಪ್ಪಲೂ ಸಾಧ್ಯವೇ ಇಲ್ಲ, ಬಾಲಿವುಡ್​ ದೇಶದಲ್ಲಿರುವ ಅತ್ಯಂತ ಜಾತ್ಯತೀತ ಸ್ಥಳ ಎಂದು ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಣಿ ಮುಖರ್ಜಿ, ನಾನು ಬಾಲಿವುಡ್​ನಲ್ಲಿ ಹೆಚ್ಚು ಕಡಿಮೆ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದೆನೆ. ನಾನಂತೂ ಇದುವರೆಗೆ ಜಾತಿ, ಧರ್ಮ ಅಥವಾ ಪ್ರಾಂತದ ಆಧಾರದಲ್ಲಿ ಅಸಮಾನತೆಯನ್ನು ಅನುಭವಿಸಿಲ್ಲ ಮತ್ತು ಬೇರೆಯವರು ಅನುಭಸಿರುವುದನ್ನು ನಾನು ಕಂಡಿಲ್ಲ ಎಂದಿದ್ದಾರೆ.
ದೇಶದಲ್ಲಿರುವ ಜಾತ್ಯಾತೀತ ಸ್ಥಳ ಯಾವುದೆಂದು ನನಗೆ ಕೇಳಿದರೆ ನಾನು ಖಂಡಿತವಾಗಿ ಬಾಲಿವುಡ್​ ಎಂದೇ ಹೇಳುತ್ತೇನೆ, ಇಲ್ಲಿ ನೀವು ಮಾಡುವ ಕೆಸಲ ಮಾತನಾಡುತ್ತದೆ, ಯಾರು ಪ್ರೇಕ್ಷಕರ ಮನವನ್ನು ಮುಟ್ಟುತ್ತಾರೋ ಅವರನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಬಾಲಿವುಡ್​ನಲ್ಲಿ ಕೆಲಸದ ಸಲುವಾಗಿ ನಡೆಯುವ ಲಾಬಿಗಳ ಬಗ್ಗೆ ಕೇಳಿದಾಗ, ನಾನು ಅವೆಲ್ಲದರಿಂದ ದೂರ ಇರುತ್ತೇನೆ, ನಾನಾಯಿತು ನನ್ನ ಕೆಲಸವಾಯಿತು. ನನಗೆ ನನ್ನ ಮಗು ಮತ್ತು ಕುಟುಂಬ ಮೊದಲ ಆದ್ಯತೆಯಾಗಿರುವ ಕಾರಣ ನನಗೆ ಈ ಲಾಬಿಗಳ ಬಗ್ಗೆ ಆಸಕ್ತಿಯಿಲ್ಲ ಎಂದು ರಾಣಿ ಮುಖರ್ಜಿ ಹೇಳಿದರು.

ಎ. ಅರ್​. ರೆಹಮಾನ್​ ಹೇಳಿದ್ದೇನು?

ಬಿಬಿಸಿ ಏಷ್ಯನ್‌ನ ಯೂಟ್ಯೂಬ್ ಚಾನೆಲ್​ನಲ್ಲಿ ಹರುನ್ ರಷೀದ್ ಅವರಿಗೆ ರೆಹಮಾನ್​ ಸಂದರ್ಶನ ನೀಡಿದ್ದಾರೆ. ರಾಮಾಯಣ ಸಿನಿಮಾಗೆ ಸಂಗೀತ ನೀಡುವಲ್ಲಿ ನಿಮ್ಮ ಧಾರ್ಮಿಕ ನಂಬಿಕೆಗಳು ಪಾತ್ರ ವಹಿಸಿವೆಯೇ ಎಂದು ರೆಹಮಾನ್ ಅವರನ್ನು ಈ ವೇಳೆ ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರ ನೀಡಿದ ರೆಹಮಾನ್​, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೇನೆ. ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಪ್ರತಿ ವರ್ಷ ಹೇಳಿಕೊಡಲಾಗುತ್ತಿತ್ತು. ಆದ್ದರಿಂದ, ನನಗೆ ಕತೆಗಳು ಚೆನ್ನಾಗಿ ತಿಳಿದಿವೆ. ಈ ಕತೆಗಳು ಮಾನವ ದಯೆ, ಉನ್ನತ ಆದರ್ಶಗಳು ಮತ್ತು ಎಲ್ಲದರ ಬಗ್ಗೆ ತಿಳಿಸುತ್ತದೆ. ಜನರು ಏನೇ ವಾದಿಸಬಹುದು ಆದರೆ, ನಾನು ಎಲ್ಲ ಒಳ್ಳೆಯ ವಿಷಯಗಳನ್ನು ಗೌರವಿಸುತ್ತೇನೆ ಮತ್ತೆ ಒಳ್ಳೆಯ ವಿಷಯಗಳನ್ನು ಕಲಿತರೂ ತಪ್ಪಿಲ್ಲ ಎಂದರು.
ನಾನು ತೊಂಭತ್ತರ ದಶಕದಲ್ಲಿ ಕೆಲಸ ಆರಂಭಿಸಿದಾಗ ಯಾವುದೇ ಧಾರ್ಮಿಕ ಪೂರ್ವಾಗ್ರಹಗಳಿರಲಿಲ್ಲ. ಆದರೆ ಕಳೆದ 8 ವರ್ಷಗಳಲ್ಲಿ ಹಿಂದಿ ಚಿತ್ರಗಳಲ್ಲಿ ನನಗೆ ತುಂಬಾ ಕಡಿಮೆ ಕೆಲಸ ಬಂದಿದೆ. ಇದಕ್ಕೆ ಕಾರಣ ನನ್ನ ಪ್ರಯತ್ನದ ಕೊರತೆಯಲ್ಲ ಮತ್ತು ನಾನು ಕೆಲಸಕ್ಕಾಗಿ ಯಾರ ಬಳಿಯೂ ಹೋಗುವುದಿಲ್ಲ. ನನಗೆ ಕಡಿಮೆ ಕೆಲಸ ಸಿಗಲು ಅಧಿಕಾರದ ಹಸ್ತಾಂತರ ಕಾರಣ ಇರಬಹುದು ಅಥವಾ ಕೋಮು ಅಂಶಗಳು ಕೂಡ ಪ್ರಭಾವ ಬೀರಿರಬಹುದು ಎನ್ನುವ ಮೂಲಕ ತಾನು ಮುಸ್ಲಿಂ ಆಗಿರುವುದರಿಂದ ತನಗೆ ಅವಕಾಶಗಳು ಕಡಿಮೆ ಎಂಬ ಅರ್ಥದಲ್ಲಿ ರೆಹಮಾನ್​ ಹೇಳಿದ್ದಾರೆ.

ತಮ್ಮ ಹೇಳಿಕೆಗೆ ಸ್ಪಷ್ಟಣೆ ನೀಡಿದ ಎ.ಆರ್​.ರೆಹಮಾನ್​

ತಮ್ಮ ಹೇಳಿಕೆಗಳ ಕುರಿತು ಗದ್ದಲ ಹೆಚ್ಚುತ್ತಿರುವಂತೆಯೇ, ಭಾನುವಾರ ರೆಹಮಾನ್ ಮೌನ ಮುರಿದು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಪುನರುಚ್ಚರಿಸಿದ್ದಾರೆ. ತಮ್ಮ ಹೇಳಿಕೆಗಳಿಂದ ನೋವುಂಟು ಮಾಡುವುದು ಎಂದಿಗೂ ತಮ್ಮ ಉದ್ದೇಶವಲ್ಲ ಮತ್ತು ಸಂಗೀತದ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಅವರು ಯಾವಾಗಲೂ ಶ್ರಮಿಸಿದ್ದಾರೆ ಎಂದು ಅವರು ಹೇಳಿದರು.
ಭಾರತ ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆ. ಕೆಲವೊಮ್ಮೆ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ಮಾಡುವುದು. ನಾನು ಎಂದಿಗೂ ನೋವುಂಟು ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net