

ದೊಡ್ಡ ಸ್ಟಾರ್ಗಳಿಲ್ಲದೇ, ಮಧ್ಯಮ ಬಜೆಟ್ನಲ್ಲಿ ಮೂಡಿಬಂದು, ಬಾಕ್ಸಾಫಿಸಿನಲ್ಲಿ ₹100 ಕೋಟಿಗೂ ಅಧಿಕ ಗಳಿಕೆ ಮಾಡಿಕೊಂಡ ಮಹಿಳಾ ಪ್ರಧಾನ ಬಯೋಪಿಕ್ "ದ ಡರ್ಟಿ ಪಿಕ್ಚರ್' (2011). ಹೀಗಾಗಿಯೇ ಬಾಲಿವುಡ್ನಲ್ಲಿ ಬಯೋಪಿಕ್ಗಳಿಗೆ, ಮಹಿಳಾ ಪ್ರಧಾನ ಚಿತ್ರಗಳ ಹೊಸ ಯುಗ ಆರಂಭಿಸಿದ ಹೆಗ್ಗಳಿಕೆ ಈ ಚಿತ್ರಕ್ಕೆ ಸಲ್ಲುತ್ತದೆ. ಮಿಲನ್ ಲೂಥ್ರಿಯಾ ನಿರ್ದೇಶನದ ದಕ್ಷಿಣ ಭಾರತದ ಸ್ಪೆಷಲ್ ಸಾಂಗ್ಗಳ ತಜ್ಞೆ "ಸಿಲ್ಕ್ ಸ್ಮಿತಾ' ಜೀವನದಿಂದ ಸ್ಫೂರ್ತಿ ಪಡೆದ ಈ ಚಿತ್ರದ ನಟನೆಗೆ ವಿದ್ಯಾ ಬಾಲನ್ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಜತೆಗೆ ಅತ್ಯುತ್ತಮ ಪ್ರಸಾದನ ಮತ್ತು ಕಾಸ್ಟ್ಯೂಮ್ ವಿಭಾಗಗಳಲ್ಲೂ "ದ ಡರ್ಟಿ ಪಿಕ್ಚರ್' ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಇದೀಗ 15 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಿರ್ಮಾಪಕಿ ಏಕ್ತಾ ಕಪೂರ್ ಚಿತ್ರದ ಸೀಕ್ವೆಲ್ ಬಗ್ಗೆ ತುಟಿ ಬಿಚ್ಚಿದ್ದಾರೆ.
ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ, "ನಾನು ಒಂದು ದೊಡ್ಡ ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದೇನೆ. ಇದೇ ಮೊದಲ ಬಾರಿಗೆ ಅದರ ಬಗ್ಗೆ ಮಾತನಾಡುತ್ತಿದ್ದೇನೆ. 15 ವರ್ಷಗಳ ಬಳಿಕ "ದ ಡರ್ಟಿ ಪಿಕ್ಚರ್ 2' ಮಾಡಲು ಪ್ಲಾ$್ಯನ್ ಮಾಡುತ್ತಿದ್ದೇನೆ. "ಸಿಲ್ಕ್ ಸ್ಮಿತಾ' ಅವರಂತೆಯೇ ಈ ಸೀಕ್ವೆಲ್ ಕೂಡ ಒಬ್ಬ ನಟ ಅಥವಾ ನಟಿಯ ಜೀವನಾಧಾರಿತ ಕಥೆಯಾಗಿರಲಿದೆ. ಅದು ಯಾರು ಅಂತ ಈಗಲೇ ಹೇಳಲಾರೆ. ಬದಲಾಗಿ ಕೆಲ ದಿನಗಳಲ್ಲೇ ಒಂದು ದೊಡ್ಡ ಅನೌನ್ಸ್ಮೆಂಟ್ ಮೂಲಕ ಮಾಹಿತಿ ನೀಡಲಿದ್ದೇನೆ' ಎಂದು ಏಕ್ತಾ ಮಾಹಿತಿ ನೀಡಿದ್ದಾರೆ. ಅಂದಹಾಗೆ, ₹12 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ "ದ ಡರ್ಟಿ ಪಿಕ್ಚರ್' ಬರೋಬ್ಬರಿ ₹117 ಕೋಟಿ ಗಳಿಕೆ ಮಾಡಿಕೊಂಡಿತ್ತು. ವಿದ್ಯಾ ಬಾಲನ್ ಜತೆ ನಾಸಿರುದ್ದಿನ್ ಶಾ, ತುಷಾರ್ ಕಪೂರ್, ಎಮ್ರಾನ್ ಹಷ್ಮಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.