ಸುಶಾಂತ್-ಜಿಯಾ ಖಾನ್ ಸಾವು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ:ಬಾಲಿವುಡ್ ಮಾಫಿಯಾ ವಿರುದ್ಧ ತನುಶ್ರೀ ದತ್ತಾ ಕಿಡಿ! Sushant Singh Rajput

ಇದು ಆಕಸ್ಮಿಕ ಸಾವಲ್ಲ ಕೊಲೆ ಎಂದ ನಟಿ ತನುಶ್ರೀ ದತ್ತಾ
ಇದು ಆಕಸ್ಮಿಕ ಸಾವಲ್ಲ ಕೊಲೆ ಎಂದ ನಟಿ ತನುಶ್ರೀ ದತ್ತಾ
Published on

ಪ್ರಮುಖ ಮುಖ್ಯಾಂಶಗಳು

  • ಅಕಾಲಿಕವಾಗಿ ಸಾವನ್ನಪ್ಪಿದ್ದ ಸುಶಾಂತ್ ಸಿಂಗ್ ರಜಪೂತ್​ ಮತ್ತು ಜಿಯಾ ಖಾನ್​
  • ಇದು ಆಕಸ್ಮಿಕ ಸಾವಲ್ಲ ಕೊಲೆ ಎಂದ ನಟಿ ತನುಶ್ರೀ ದತ್ತಾ
  • ಈ ಕೊಲೆಯನ್ನು ಬಾಲಿವುಡ್​ನ ಮಾಫಿಯಾ ಮಾಡಿಸಿದೆ ಎಂದ ನಟಿ
ಮುಂಬೈ: ಬಾಲಿವುಡ್‌ನ ಗ್ಲಾಮರ್ ಲೋಕದ ಹಿಂದೆ ಅಡಗಿರುವ ಕರಾಳ ಮುಖದ ಬಗ್ಗೆ ನಟಿ ತನುಶ್ರೀ ದತ್ತಾ ಮತ್ತೊಮ್ಮೆ ಬಾಂಬ್ ಸಿಡಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಮತ್ತು ಜಿಯಾ ಖಾನ್ (Jiah Khan) ಅವರ ಅಕಾಲಿಕ ಸಾವು ಕೇವಲ ಆಕಸ್ಮಿಕವಲ್ಲ, ಅದರ ಹಿಂದೆ ಚಿತ್ರೋದ್ಯಮದಲ್ಲಿರುವ ಸಿನಿಮಾ ಮಾಫಿಯಾದ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ತನುಶ್ರೀ, ಬಾಲಿವುಡ್‌ನಲ್ಲಿ ನಡೆಯುತ್ತಿರುವ ವ್ಯವಸ್ಥಿತ ಕಿರುಕುಳ ಮತ್ತು ಯುವ ಪ್ರತಿಭೆಗಳನ್ನು ತುಳಿಯುವ ತಂತ್ರಗಳ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಅವರನ್ನು ಸಾವಿನ ಅಂಚಿಗೆ ತಳ್ಳಲಾಯಿತು

ಸುಶಾಂತ್ ಮತ್ತು ಜಿಯಾ ಖಾನ್ ಕೇವಲ ಮಾನಸಿಕ ಅಸ್ವಸ್ಥತೆಯಿಂದ ಪ್ರಾಣ ಕಳೆದುಕೊಂಡಿಲ್ಲ. ಅವರನ್ನು ಹಿಂತಿರುಗಲು ದಾರಿಯೇ ಇಲ್ಲದಂತಹ ಭಯಾನಕ ಪರಿಸ್ಥಿತಿಗೆ ತಳ್ಳಲಾಗಿತ್ತು ಎಂದು ತನುಶ್ರೀ ಗುಡುಗಿದ್ದಾರೆ.
ಅವರ ಪ್ರಕಾರ, ಬಾಲಿವುಡ್‌ನಲ್ಲಿ ಯಾರು ಬೆಳೆಯಬೇಕು ಮತ್ತು ಯಾರನ್ನು ಚಿತ್ರೋದ್ಯಮದಿಂದ ಹೊರಹಾಕಬೇಕು ಎಂದು ನಿರ್ಧರಿಸುವ ಒಂದು ಗುಂಪು ಕೆಲಸ ಮಾಡುತ್ತಿದೆ. ಈ ಗುಂಪು ಸುಶಾಂತ್ ಅವರ ವೃತ್ತಿಜೀವನವನ್ನು ನಾಶಮಾಡಲು ಒಂದರ ನಂತರ ಒಂದರಂತೆ ದೊಡ್ಡ ಪ್ರಾಜೆಕ್ಟ್‌ಗಳಿಂದ ಅವರನ್ನು ಕೈಬಿಡುವಂತೆ ಮಾಡಿತ್ತು ಎಂದು ಅವರು ಆರೋಪಿಸಿದ್ದಾರೆ.

ವಿವೇಕಯುತ ವ್ಯಕ್ತಿ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳಲ್ಲ!

ತಮ್ಮ ವಾದಕ್ಕೆ ಪುಷ್ಟಿ ನೀಡಿದ ತನುಶ್ರೀ, ಯಾವುದೇ ವಿವೇಕಯುತ ವ್ಯಕ್ತಿ, ಅದರಲ್ಲೂ ಯಶಸ್ಸು ಕಂಡಿರುವ ಮತ್ತು ಆತ್ಮವಿಶ್ವಾಸ ಇರುವ ನಟರು ಇದ್ದಕ್ಕಿದ್ದಂತೆ ಎಚ್ಚರಗೊಂಡು ಜೀವನ ಕೊನೆಗೊಳಿಸಲು ನಿರ್ಧರಿಸುವುದಿಲ್ಲ. ಒಬ್ಬ ವ್ಯಕ್ತಿ ಸೋಲನ್ನು ಒಪ್ಪಿಕೊಳ್ಳುವ ಹಂತಕ್ಕೆ ಬಂದಿದ್ದಾನೆ ಎಂದರೆ ಆತನ ಮೇಲೆ ಎಂತಹ ಗಂಭೀರವಾದ ಒತ್ತಡ ಹೇರಲಾಗಿರಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಮಾಫಿಯಾ ಆದೇಶ ಪಾಲಿಸದಿದ್ದರೆ ಶತ್ರುಗಳೇ?

ಬಾಲಿವುಡ್‌ನ ಪ್ರಭಾವಿ ವಲಯದ ಬಗ್ಗೆ ಮಾತನಾಡಿದ ಅವರು, ಇಲ್ಲಿನ ಕೆಲವು ಜನರ ಅಹಂಕಾರ ಆಕಾಶದೆತ್ತರದಲ್ಲಿದೆ. ನೀವು ಅವರ ಆದೇಶಗಳನ್ನು ಪಾಲಿಸದಿದ್ದರೆ ಅಥವಾ ಅವರ ಮಾರ್ಗದಲ್ಲಿ ನಡೆಯದಿದ್ದರೆ ನೀವು ಅವರ ಪಾಲಿಗೆ ಶತ್ರುಗಳಾಗುತ್ತೀರಿ. ಪ್ರಾಮಾಣಿಕವಾಗಿ ಮತ್ತು ಸ್ವತಂತ್ರವಾಗಿ ಕೆಲಸ ಮಾಡಲು ಬಯಸುವ ಪ್ರತಿಭೆಗಳನ್ನು ಗುರಿಯಾಗಿಸಿ ಅವರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮೀ ಟೂ ಚಳವಳಿಯ ಕಿಡಿ

2008 ರಲ್ಲಿ 'ಹಾರ್ನ್ ಓಕೆ ಪ್ಲೀಸ್' ಚಿತ್ರದ ಸೆಟ್‌ನಲ್ಲಿ ಹಿರಿಯ ನಟ ನಾನಾ ಪಾಟೇಕರ್ ಅವರ ಮೇಲೆ ಕಿರುಕುಳದ ಆರೋಪ ಹೊರಿಸುವ ಮೂಲಕ ತನುಶ್ರೀ ದತ್ತಾ ಭಾರತದಲ್ಲಿ ಮೀ ಟೂ (Me Too) ಚಳವಳಿಗೆ ಅಡಿಪಾಯ ಹಾಕಿದ್ದರು. ಅಂದಿನಿಂದ ತಮಗೆ ಬಾಲಿವುಡ್‌ನಲ್ಲಿ ಕೆಲಸ ಸಿಗದಂತೆ ಮಾಡಲಾಯಿತು ಎಂದು ಅವರು ಈ ಹಿಂದೆಯೇ ಹೇಳಿಕೊಂಡಿದ್ದರು.
ಮನರಂಜನಾ ಪ್ರಪಂಚದಿಂದ ಬಹಳ ಸಮಯ ದೂರವಿದ್ದರೂ, ತನುಶ್ರೀ ಅವರ ಈ ಇತ್ತೀಚಿನ ಹೇಳಿಕೆಗಳು ಬಾಲಿವುಡ್‌ನಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿವೆ. ನೆಟ್ಟಿಗರು ಈಗ ಜಸ್ಟಿಸ್ ಫಾರ್ ಸುಶಾಂತ್ ಮತ್ತು ಬಾಲಿವುಡ್ ಮಾಫಿಯಾ ಹ್ಯಾಶ್‌ಟ್ಯಾಗ್‌ಗಳ ಅಡಿಯಲ್ಲಿ ತನುಶ್ರೀ ಅವರ ಮಾತನ್ನು ಬೆಂಬಲಿಸುತ್ತಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net