ಗ್ಲಿಸರಿನ್ ಬೇಡವೆಂದು ಕೆನ್ನೆಗೆ ಬಾರಿಸಿದ: ಯಶ್ವಂತ್ ಸೆಟ್​ನಲ್ಲಿ ನಟಿ ಮಧೂಗೆ ನಾನಾ ಕಪಾಳಮೋಕ್ಷ; ನಾನಾಗೆ ತಿರುಗೇಟು ಕೊಟ್ಟಿದ್ದ ಅಣ್ಣಯ್ಯ ಬೆಡಗಿ! Actress Madhoo

ನಾನಾ ಪಾಟೇಕರ್​ನಿಂದ ನಟಿ ಮಧೂಗೆ ಕಪಾಳಮೋಕ್ಷ, ನಟಿಯಿಂದ ತಿರುಗೇಟು!
ನಾನಾ ಪಾಟೇಕರ್​ನಿಂದ ನಟಿ ಮಧೂಗೆ ಕಪಾಳಮೋಕ್ಷ, ನಟಿಯಿಂದ ತಿರುಗೇಟು!
Published on
ಮುಂಬೈ: ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಅಂದ್ರೆ ತಕ್ಷಣ ನೆನಪಾಗೋದು ಅವರ ಖಡಕ್ ಡೈಲಾಗ್ ಡೆಲಿವರಿ ಮತ್ತು ಗಂಭೀರವಾದ ನಟನಾ ಶೈಲಿ. ಆದರೆ ಚಿತ್ರರಂಗದಲ್ಲಿ ಅವರ ಸಿಡುಕು ಸ್ವಭಾವದ ಬಗ್ಗೆಯೂ ಸಾಕಷ್ಟು ಕಥೆಗಳಿವೆ. ಈಗ ಅಂತಹದ್ದೇ ಒಂದು ಹಳೆಯ ಘಟನೆಯನ್ನು ಅವರೊಟ್ಟಿಗೆ ನಟಿಸಿದ್ದ ಕನ್ನಡಿಗರ ನೆಚ್ಚಿನ ಅಣ್ಣಯ್ಯ ಖ್ಯಾತಿಯ ನಟಿ ಮಧೂ (Actress Madhoo) ಹಂಚಿಕೊಂಡಿದ್ದಾರೆ.
1997ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ ಯಶ್ವಂತ್ ಶೂಟಿಂಗ್ ಸೆಟ್‌ನಲ್ಲಿ ನಾನಾ ಪಾಟೇಕರ್ ನಟಿ ಮಧೂಗೆ ನಿಜವಾಗಿಯೂ ಕಪಾಳಮೋಕ್ಷ ಮಾಡಿದ್ದರಂತೆ. ಆದರೆ, ಮಧೂ ಕೂಡ ಸುಮ್ಮನೆ ಕೂರದೆ ತಕ್ಷಣ ನಾನಾಗೆ ತಿರುಗೇಟು ನೀಡಿದ್ದರಂತೆ.

ಗ್ಲಿಸರಿನ್ ಬೇಡ ಅಂದ್ರು, ಕೆನ್ನೆಗೆ ಬಾರಿಸೇ ಬಿಟ್ರು!

ಅನಿಲ್ ಮಟ್ಟೂ ನಿರ್ದೇಶನದ ಯಶ್ವಂತ್ ಚಿತ್ರದಲ್ಲಿ ನಾನಾ ಮತ್ತು ಮಧೂ ಗಂಡ-ಹೆಂಡತಿಯಾಗಿ ನಟಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಘಟನೆಯನ್ನು ನೆನಪಿಸಿಕೊಂಡ ಮಧೂ, ಆ ಒಂದು ಸೀನ್ ನನ್ನನ್ನು ನಿಜವಾಗಿಯೂ ಅಳುವಂತೆ ಮಾಡಿತು ಎಂದಿದ್ದಾರೆ.
ನನಗೆ ಆ ಸೀನ್‌ನಲ್ಲಿ ಅಳಬೇಕಿತ್ತು, ಅದಕ್ಕೆ ಗ್ಲಿಸರಿನ್ ಹಾಕಿಕೊಳ್ಳಲು ರೆಡಿಯಾಗಿದ್ದೆ. ಆದರೆ ನಾನಾ ಅದಕ್ಕೆ ಬಿಡಲಿಲ್ಲ. ಗ್ಲಿಸರಿನ್ ಎಲ್ಲಾ ಬೇಡ, ಆ ನೋವನ್ನು ಒಳಗಿನಿಂದ ಅನುಭವಿಸು, ಕಣ್ಣೀರು ನ್ಯಾಚುರಲ್ ಆಗಿ ಬರಬೇಕು ಅಂದರು.
ಆದರೆ ನನಗೆ ಎಷ್ಟು ಪ್ರಯತ್ನಿಸಿದರೂ ಅಳು ಬರಲಿಲ್ಲ. ಅಷ್ಟರಲ್ಲೇ ನಾನಾ ಪಾಟೇಕರ್ ನನಗೊಂದು ಬಲವಾದ ಕಪಾಳಮೋಕ್ಷ ಮಾಡಿ ಬಿಟ್ಟರು. ಅನಿರೀಕ್ಷಿತ ಪೆಟ್ಟಿನಿಂದಾಗಿ ನನ್ನ ಕಣ್ಣಲ್ಲಿ ನಿಜವಾಗಿಯೂ ನೀರು ಬಂತು, ಎಂದು ಮಧೂ ಹೇಳಿದ್ದಾರೆ.

ಮಧೂ ಕೊಟ್ಟರು ತಿರುಗೇಟು!

ರಿಹರ್ಸಲ್ ಮಾಡುವಾಗ ನಾನಾ ಪಾಟೇಕರ್ ಈ ರೀತಿ ಹೊಡೆಯುವ ಯಾವುದೇ ಮುನ್ಸೂಚನೆ ನೀಡಿರಲಿಲ್ಲವಂತೆ. ಹಾಗಾಗಿ ಈ ಹಠಾತ್ ಕಪಾಳಮೋಕ್ಷದಿಂದ ಮಧೂಗೆ ತೀವ್ರ ಆಘಾತ ಮತ್ತು ಕೋಪ ಬಂದಿತ್ತು.
ಅವರು ಹಠಾತ್ ಆಗಿ ಹೊಡೆದಾಗ ನನಗೆ ತಡೆಯಲು ಆಗಲಿಲ್ಲ. ಅತಿಯಾದ ಕೋಪದಲ್ಲಿ ನನ್ನ ಕೈ ಸುಮ್ಮನೆ ಇರಲಿಲ್ಲ, ತಕ್ಷಣ ರಿಫ್ಲೆಕ್ಸ್ ಎಂಬಂತೆ ನಾನು ಅವರಿಗೆ ಪ್ರತಿಯಾಗಿ ಕೆನ್ನೆಗೆ ಬಾರಿಸಿದೆ. ಅವರು ನನಗೆ ಹೊಡೆದರು, ನಾನು ಅವರಿಗೆ ಹೊಡೆದೆ, ಎಂದು ಮಧೂ ಹೇಳಿದ್ದಾರೆ.
ನಾನಾ ಪಾಟೇಕರ್ ಕೆಟ್ಟವರಲ್ಲ, ಆದರೆ...
ಇಷ್ಟೆಲ್ಲಾ ಆದರೂ ನಾನಾ ಪಾಟೇಕರ್ ಸೆಟ್‌ನಲ್ಲಿ ತನ್ನೊಂದಿಗೆ ಎಂದಿಗೂ ಅಸಭ್ಯವಾಗಿ ನಡೆದುಕೊಳ್ಳಲಿಲ್ಲ ಎಂದು ಮಧೂ ಸ್ಪಷ್ಟಪಡಿಸಿದ್ದಾರೆ. ನಾನು ನೈಜವಾಗಿ ಅಭಿನಯಿಸಬೇಕು ಎನ್ನುವುದು ಅವರ ಆಸೆ ಆಗಿತ್ತು. ನಾನು ಕ್ಯಾಮೆರಾ ಆಫ್ ಆದ ತಕ್ಷಣ ನಾರ್ಮಲ್ ಮೂಡ್‌ಗೆ ಬರುವುದನ್ನು ಅವರು ವಿರೋಧಿಸುತ್ತಿದ್ದರು. ಪಾತ್ರದಲ್ಲೇ ಜೀವಿಸಬೇಕು ಅನ್ನೋದು ಅವರ ಸಿದ್ಧಾಂತವಾಗಿತ್ತು ಎಂದಿದ್ದಾರೆ.

ಸಾಯಿ ಪರಾಂಜಪೆ ಜೊತೆಗೂ ಆಗಿತ್ತು ಜಗಳ!

ನಾನಾ ಪಾಟೇಕರ್ ಅವರ ಕೋಪದ ಕಥೆ ಇಲ್ಲಿಗೆ ಮುಗಿಯಲ್ಲ. ಈ ಹಿಂದೆ ಖ್ಯಾತ ನಿರ್ದೇಶಕಿ ಸಾಯಿ ಪರಾಂಜಪೆ ಕೂಡ 1990ರ ದಿಶಾ ಚಿತ್ರದ ಶೂಟಿಂಗ್ ವೇಳೆ ನಾನಾ ಜೊತೆಗಿನ ಕಿರಿಕ್ ನೆನಪಿಸಿಕೊಂಡಿದ್ದರು. ಚಪ್ಪಲಿಯ ವಿಷಯಕ್ಕೆ ನಾನಾ ಸೆಟ್‌ನಲ್ಲಿ ಜಗಳ ತೆಗೆದಾಗ, ಸಾಯಿ ನಿನ್ನ ಆಟ ಇಲ್ಲಿ ನಡೆಯಲ್ಲ, ವೃತ್ತಿಪರನಾಗಿ ಇರು ಇಲ್ಲದಿದ್ದರೆ ಸೆಟ್‌ನಿಂದ ಹೊರನಡೆ ಎಂದು ಗದರಿಸಿದ್ದರಂತೆ. ಆಗ ನಾನಾ ನೀನು ಹೆಣ್ಣು ಮಗಳಾಗಿದ್ದಕ್ಕೆ ಬದುಕುಳಿದೆ, ಇಲ್ಲದಿದ್ದರೆ ಕಥೆಯೇ ಬೇರೆ ಇರುತ್ತಿತ್ತು ಎಂದು ವಾರ್ನಿಂಗ್ ಕೊಟ್ಟು ಹೋಗಿದ್ದರಂತೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net