ರಣವೀರ್ ಸಿಂಗ್ ನಿರ್ಗಮನದ ಬಳಿಕ ಮತ್ತೆ ಡಾನ್ ಆಗಿ ಶಾರುಖ್? ಬಾಲಿವುಡ್‌ನಲ್ಲಿ ಭಾರೀ ಚರ್ಚೆ! | Shah Rukh Khan

Shah Rukh Khan
Shah Rukh Khan
Published on
ಮುಂಬೈ: ಬಾಲಿವುಡ್‌ನ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾದ 'ಡಾನ್' ಸರಣಿಯ ಮೂರನೇ ಭಾಗ, 'ಡಾನ್ 3' ಕುರಿತು ನಿರಂತರ ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ರಣವೀರ್ ಸಿಂಗ್ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಘೋಷಿಸಲಾಗಿತ್ತು. ಆದರೆ, ಈಗ ಅವರು ಈ ಯೋಜನೆಯಿಂದ ಹೊರನಡೆದಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
ಹೌದು, ಈ ಬೆಳವಣಣಿಗೆಯ ಬೆನ್ನಲ್ಲೇ, ಮೂಲ ಡಾನ್ ಶಾರುಖ್ ಖಾನ್ ಮತ್ತೆ ಚಿತ್ರಕ್ಕೆ ಮರಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಬಾಲಿವುಡ್ ಅಂಗಳದಲ್ಲಿ ಗುಸುಗುಸು ಶುರುವಾಗಿದೆ. 'ಡಾನ್ 3' ಚಿತ್ರದಲ್ಲಿ ರಣವೀರ್ ಸಿಂಗ್ ಬದಲಿಗೆ ಬೇರೆ ನಾಯಕನನ್ನು ಹುಡುಕಲಾಗುತ್ತಿದೆ ಎಂದು ನಿರ್ದೇಶಕ ಫರ್ಹಾನ್ ಅಖ್ತರ್ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಪ್ರೇಕ್ಷಕರು ಮತ್ತೆ ಶಾರುಖ್ ಖಾನ್ ಅವರನ್ನು ಡಾನ್ ಆಗಿ ನೋಡಲು ಬಯಸುತ್ತಿದ್ದಾರೆ. ಚಿತ್ರತಂಡವೂ ಶಾರುಖ್ ಅವರನ್ನು ಸಂಪರ್ಕಿಸಿದ್ದು, ಅವರು ಚಿತ್ರಕ್ಕೆ ಮರಳಲು ಒಂದು ಷರತ್ತು ವಿಧಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಶಾರುಖ್ ಷರತ್ತು ಏನು?

ವರದಿಗಳ ಪ್ರಕಾರ, ಶಾರುಖ್ ಖಾನ್ 'ಡಾನ್ 3' ಗೆ ಮರಳಲು ಒಪ್ಪಿದ್ದಾರಾದರೂ, ಕಥೆಯಲ್ಲಿ ದೊಡ್ಡ ಬದಲಾವಣೆಗಳನ್ನು ಬಯಸಿದ್ದಾರೆ ಎನ್ನಲಾಗಿದೆ. ಅವರ ಪಾತ್ರವನ್ನು ಹೆಚ್ಚು ಆಳವಾಗಿ, ಹೊಸ ಆಯಾಮಗಳಲ್ಲಿ ಚಿತ್ರಿಸಬೇಕು ಎಂದು ಅವರು ಷರತ್ತು ವಿಧಿಸಿದ್ದಾರೆ. 'ಡಾನ್' ಸರಣಿಗೆ ಶಾರುಖ್ ಖಾನ್ ವಿಭಿನ್ನ ಮೆರುಗನ್ನು ನೀಡಿದ್ದರು. ಅವರ ನಿಗೂಢ ಮತ್ತು ಸ್ಟೈಲಿಶ್ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

ರಣವೀರ್ ಸಿಂಗ್ ಡಾನ್ 3 ಬಿಟ್ಟುಕೊಟ್ಟಿದ್ದೇಕೆ?

ಪಿಂಕ್‌ವಿಲ್ಲಾ ವರದಿಯ ಪ್ರಕಾರ, ಧುರಂಧರ್ ಅವರ ಬ್ಲಾಕ್‌ಬಸ್ಟರ್ ರನ್ ನಂತರ ರಣವೀರ್ ಸಿಂಗ್ ಅವರ ಆದ್ಯತೆಗಳು ಬದಲಾಗಿವೆ. "ಅವರು ಸಂಜಯ್ ಲೀಲಾ ಬನ್ಸಾಲಿ, ಲೋಕೇಶ್ ಕನಕರಾಜ್ ಮತ್ತು ಅಟ್ಲೀ ಅವರಂತಹ ಚಲನಚಿತ್ರ ನಿರ್ಮಾಪಕರೊಂದಿಗೆ ಸಹಕರಿಸಲು ಉತ್ಸುಕರಾಗಿದ್ದಾರೆ ಮತ್ತು ಅದೇ ಸಮಯದಲ್ಲಿ, ಅವರು ಸತತ ದರೋಡೆಕೋರ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುವುದಿಲ್ಲ" ಎಂದು ಮೂಲಗಳು ತಿಳಿಸಿವೆ.

ಪ್ರೇಕ್ಷಕರ ನಿರೀಕ್ಷೆ

ರಣವೀರ್ ಸಿಂಗ್ ಅವರು ಡಾನ್ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದವು. ಈಗ ಶಾರುಖ್ ಮರಳುವ ಸಾಧ್ಯತೆಗಳು ಕೇಳಿಬರುತ್ತಿದ್ದಂತೆ, ಅವರ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ. ಫರ್ಹಾನ್ ಅಖ್ತರ್ ಮತ್ತು ಶಾರುಖ್ ಖಾನ್ ಮತ್ತೊಮ್ಮೆ ಒಂದಾಗುವ ಮೂಲಕ 'ಡಾನ್' ಸರಣಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ಪ್ರೇಕ್ಷಕರು ಆಶಿಸುತ್ತಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವವರೆಗೂ ಕಾದು ನೋಡಬೇಕಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net