ಪ್ರತಿ ತಂಡವೂ ಆದಷ್ಟು ಬೇಗ ಸಿನಿಮಾ ಮಾಡಿ, ತೆರೆಯ ಮೇಲೆ ತರಬೇಕು ಎಂದೇ ನಿರ್ಧರಿಸಿ ಶೂಟಿಂಗ್ ಕಣಕ್ಕಿಳಿಯುತ್ತವೆ. ಅದರಲ್ಲಿ ಹಲವು ಸಿನಿಮಾಗಳು ಶೂಟಿಂಗ್ ಮುಗಿಸಿ, ರಿಲೀಸ್ ಆಗಿ ಪ್ರೇಕ್ಷಕರನ್ನು ಸೆಳೆದರೆ, ಇನ್ನು ಕೆಲ ಸಿನಿಮಾಗಳು ಶೂಟಿಂಗ್ ಪೂರ್ಣಗೊಳಿಸಿದರೂ ಅನಿವಾರ್ಯ ಕಾರಣಗಳಿಂದಾಗಿ ಬಿಡುಗಡೆಯಾಗದೆ ಡಬ್ಬಾ ಸೇರಿರುತ್ತವೆ. ಹೀಗೆ 47 ವರ್ಷಗಳ ಹಿಂದೆ ನಿರ್ಮಾಣವಾಗಿ, ಮೂಲೆ ಸೇರಿದ್ದ ಬಾಲಿವುಡ್ ಚಿತ್ರವೊಂದು ಇದೀಗ ಟಿವಿ ಮತ್ತು ಒಟಿಟಿ ಮೂಲಕ ಬಿಡುಗಡೆಯಾಗಿದೆ. ಅದೇ ‘ಸೌಗಾತ್’. ಬಾಲಿವುಡ್ ತಾರೆಯರಾದ ಶಶಿಕಪೂರ್, ಶಬಾನಾ ಆಜ್ಮಿ ಕಲಾ ಬಳಗದಲ್ಲಿದ್ದ ಸೌಗಾತ್ ಚಿತ್ರವು 1979ರಲ್ಲಿ ಸೆಟ್ಟೇರಿತ್ತು. ಅಂದುಕೊಂಡಂತೆ, ಶೂಟಿಂಗ್ ಕೂಡ ಪೂರ್ಣಗೊಳಿಸಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಥಿಯೇಟರ್‌ನಲ್ಲಿ ರಿಲೀಸ್ ಆಗಿರಲಿಲ್ಲ. ಇದೀಗ ಚಿತ್ರತಂಡ ಟಿವಿ ಮತ್ತು ಯೂಟ್ಯೂಬ್‌ನಲ್ಲಿ ಚಿತ್ರವನ್ನು ರಿಲೀಸ್ ಮಾಡಿದೆ. ಕಳೆದ ಫೆ. 6ರಂದು ಖಾಸಗಿ ವಾಹಿನಿಯಲ್ಲಿ ನೇರವಾಗಿ ಚಿತ್ರ ಬಿಡುಗಡೆಯಾಗಿದೆ. ಇಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಮಾ. 17ರಂದು ಯೂಟ್ಯೂಬ್‌ನಲ್ಲಿ ಚಿತ್ರವನ್ನು ರಿಲೀಸ್ ಮಾಡಲಾಗಿದೆ. ಆ ಮೂಲಕ 47 ವರ್ಷಗಳ ಹಿಂದೆ ಸಿದ್ಧವಾಗಿದ್ದ ಈ ಚಿತ್ರಕ್ಕೆ ಕೊನೆಗೂ ಬಿಡುಗಡೆ ಭಾಗ್ಯ ದೊರೆತಿದೆ. ದುರಾದೃಷ್ಟವೆಂದರೆ, ‘ಸೌಗಾತ್’ ಮುಖ್ಯ ಆಕರ್ಷಣೆಯಾಗಿದ್ದ ನಟ ಶಶಿಕಪೂರ್ ಹಾಗೂ ನಿರ್ದೇಶಕ ಪ್ರಯಾಗ್ ರಾಜ್ ಅವರು ನಿಧನರಾಗಿ ಕೆಲ ವರ್ಷಗಳಾಗಿದೆ. ಇನ್ನು ಆಸಕ್ತಿಕರ ವಿಷಯ ಏನೆಂದರೆ, ಈ ಚಿತ್ರದಲ್ಲಿ ಶಬಾನಾ ಆಜ್ಮಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. -ಏಜೆನ್ಸೀಸ್