ಬಾಲಿವುಡ್ ಚೆಲುವೆ ಮಧುಬಾಲಾ ಪಾತ್ರದಲ್ಲಿ ಮಿಂಚಲಿದ್ದಾರೆ ಧುರಂಧರ್ ನಟಿ

ಮಧುಬಾಲಾ ಪಾತ್ರದಲ್ಲಿ ಸಾರಾ
ಮಧುಬಾಲಾ ಪಾತ್ರದಲ್ಲಿ ಸಾರಾ
Published on

ಪ್ರಮುಖ ಮುಖ್ಯಾಂಶಗಳು

  • ಹಿಂದಿಯಲ್ಲಿ ಹೊಸ ಹೆಜ್ಜೆ ಮೂಡಿಸಲು ಸಿದ್ಧರಾದ ಸಾರಾ ಅರ್ಜುನ್​
  • ಹಿಂದಿ ಲೆಜೆಂಡರಿ ಪಾತ್ರಕ್ಕೆ ಆಯ್ಕೆಯಾದ ಯಲೀನಾ
  • ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಚಿತ್ರ
ಭಾರತೀಯ ಚಿತ್ರರಂಗದಲ್ಲಿ ‘ಬೆಳಂದಿಗಳ ಬಾಲೆ’ ಎಂದೇ ಪ್ರಸಿದ್ಧಿಯಾಗಿದ್ದ ನಟಿ ಮಧುಬಾಲಾ ಕುರಿತ ಬಯೋಪಿಕ್ ಆಗಲಿದೆ ಎಂಬ ಮಾತು ಕೇಳಿಬರುತ್ತಿತ್ತು. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ ಎಂಬುದು ಖಚಿತವಾಗಿತ್ತು. ಆದರೆ, ಅದ್ಯಾಕೋ, ಸಿನಿಮಾ ಮಾತ್ರ ಸೆಟ್ಟೇರದೆ ಕೇವಲ ಮಾತಿಗೆ ಸೀಮಿತವಾಗಿತ್ತು. ಇದೀಗ ಚಿತ್ರದ ಕೆಲಸಗಳಿಗೆ ಚುರುಕು ಸಿಕ್ಕಿದ್ದು, ಶೀಘ್ರವೇ ಸಿನಿಮಾ ಸೆಟ್ಟೇರಲು ಸಿದ್ಧವಾಗುತ್ತಿದೆ. ಇನ್ನು, ಅಪೂರ್ವ ಸುಂದರಿ ಮಧುಬಾಲಾ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ವಿಷಯವೇ ಕುತೂಹಲಕ್ಕೆ ಕಾರಣವಾಗಿತ್ತು. ಈ ಲೆಜೆಂಡರಿ ನಟಿ ಮಧುಬಾಲಾ ಪಾತ್ರಕ್ಕೆ ಕಿಯಾರಾ ಅಡ್ವಾಣಿ, ಅದಿತಿ ರಾವ್ ಹೈದರಿ, ಶ್ರಾವರಿ ವಾಘ್, ಅನೀತ್ ಪಡ್ಡಾ, ಕಲ್ಯಾಣಿ ಪ್ರಿಯದರ್ಶನ್ ಹೀಗೆ ಸಾಲು ಸಾಲು ಹೆಸರುಗಳು ಕೇಳಿಬಂದಿದ್ದವು. ಇತ್ತೀಚಿನ ಬೆಳವಣಿಗೆ ಎಂಬಂತೆ ‘ಧುರಂಧರ್’ ಸರಣಿ ಸಕ್ಸಸ್ ಬೆನ್ನಲ್ಲೇ ನಟಿ ಸಾರಾ ಅರ್ಜುನ್ ಹೆಸರು ಮುನ್ನಲೆಗೆ ಬಂದಿತ್ತು. ಸಂಜಯ್ ಲೀಲಾ ಬನ್ಸಾಲಿ ಅಂತಿಮವಾಗಿ ಅಳೆದುತೂಗಿ ‘ಧುರಂಧರ್’ ನಟಿ ಸಾರಾ ಅರ್ಜುನ್‌ರನ್ನೇ ಮಧುಬಾಲಾ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ಸಾರಾ ಪಾತ್ರಕ್ಕಾಗಿ ಸಿದ್ಧತೆ ನಡೆಸಿದ್ದು, ಇದೇ ಜೂನ್‌ನಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಈ ಚಿತ್ರ ನೇರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ‘ಡಾರ್ಲಿಂಗ್ಸ್’ ಖ್ಯಾತಿಯ ಜಸ್ಮೀತ್ ಕೆ.ರೀನ್ ಆ್ಯಕ್ಷನ್- ಕಟ್ ಹೇಳಲಿದ್ದಾರೆ. -ಏಜೆನ್ಸೀಸ್

ಹಿಂದಿಯ ಎವರ್‌ಗ್ರೀನ್ ನಟಿ

ಮಧುಬಾಲಾ, ಭಾರತೀಯ ಚಿತ್ರರಂಗದ ಎವರ್‌ಗ್ರೀನ್ ನಟಿ. ಇವರ ಮೂಲ ಹೆಸರು ಮುಮ್ತಾಜ್ ಜಹಾನ್ ಬೇಗಂ ದೆಹ್ಲವಿ. ದೆಹಲಿಯಲ್ಲಿ 1933ರ ೆ.14ರಂದು ಜನಿಸಿದ್ದರು. ಎಂಟು ವರ್ಷದಲ್ಲಿರುವಾಗಲೇ ‘ಬಸಂತ್’ (1942) ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಪರಿಚಯವಾಗಿದ್ದ ಮುಮ್ತಾಜ್, ಬಳಿಕ 1947ರಲ್ಲಿ ತೆರೆಕಂಡ ‘ನೀಲ್ ಕಮಲ್’ ಮೂಲಕ ಪೂರ್ಣಪ್ರಮಾಣದ ನಾಯಕಿಯಾದರು. ‘ಚಿತ್ತೋರ್ ವಿಜಯ್’, ‘ದಿಲ್ ಕಿ ರಾಣಿ’, ‘ಅಪರಾಧಿ’, ‘ಮುಘಲ್ ಇ ಅಜಂ’ ಸೇರಿ ಹಿಂದಿಯ 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾವ ತುಂಬಿದ ನಟನೆ, ಸೌಂದರ್ಯದ ಮೂಲಕ ಗುರುತಿಸಿಕೊಂಡಿದ್ದ ಮುಮ್ತಾಜ್, ಕ್ರಮೇಣ ‘ಮಧುಬಾಲಾ’ ಎಂದೇ ಚಿತ್ರರಂಗದಲ್ಲಿ ಹೆಸರುವಾಸಿಯಾದರು. 1960ರಲ್ಲಿ ಗಾಯಕ ಕಿಶೋರ್ ಕುಮಾರ್ ವರಿಸಿದ್ದ ಮಧುಬಾಲಾ, 1694ರಲ್ಲಿ ತಮ್ಮ 36ನೇ ವಯಸ್ಸಿನಲ್ಲಿ ಅನಾರೋಗ್ಯದಿಂದಾಗಿ ದುರಂತ ಅಂತ್ಯ ಕಂಡಿದ್ದರು. ಇದೀಗ ನಟಿಯ ಜೀವನ ಹಾಗೂ ಸಾಧನೆ ಕುರಿತು ಹಿಂದಿಯಲ್ಲಿ ಸಿನಿಮಾವಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net