Sameer Wankhede: ಆರ್ಯನ್ ಖಾನ್ ನಿರ್ದೇಶನದ ಮೊದಲ ವೆಬ್ ಸರಣಿ 'ದಿ ಬಾಡ್ಸ್ ಆಫ್ ಬಾಲಿವುಡ್' ವಿರುದ್ಧ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಗುರುವಾರ (ಜ. 29) ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರ ಪೀಠವು ಈ ಅರ್ಜಿಯನ್ನು ಪರಿಶೀಲಿಸಲು ಇಲ್ಲಿನ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ' ಇಲ್ಲ ಎಂದು ಹೇಳಿದೆ.
ಸಮೀರ್ ವಾಂಖೆಡೆ ಮೂಲತಃ ಮುಂಬೈ ನಿವಾಸಿಯಾಗಿದ್ದು, ಪ್ರತಿವಾದಿ ಸಂಸ್ಥೆಗಳಾದ ರೆಡ್ ಚಿಲ್ಲೀಸ್ ಎಂಟರ್ಟೈನ್‌ಮೆಂಟ್ ಮತ್ತು ನೆಟ್‌ಫ್ಲಿಕ್ಸ್ ಕಚೇರಿಗಳು ಕೂಡ ಮುಂಬೈನಲ್ಲಿವೆ, ಹೀಗಿದ್ದಾಗ ಈ ಪ್ರಕರಣವನ್ನು ದೆಹಲಿಯಲ್ಲಿ ವಿಚಾರಣೆ ನಡೆಸುವುದು ಸಮಂಜಸವಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಈ ಹಿಂದೆ ಆರ್ಯನ್ ಖಾನ್ ನಿರ್ದೇಶನದ ನೆಟ್‌ಫ್ಲಿಕ್ಸ್ ಸರಣಿ 'ದಿ ಬ್ಯಾಡ್ಸ್ ಆಫ್ ಬಾಲಿವುಡ್' ನಲ್ಲಿ ಒಂದು ಪಾತ್ರ ಸಮೀರ್ಕೆ ಹೋಲಿಕೆಯಾಗುತ್ತಿತ್ತು, ಇದು ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಷಡ್ಯಂತ್ರ ರೂಪಿಸಲಾಗಿದೆ ಎಂದು ಅವರು ವಾದಿಸಿದ್ದರು. ಈ ವಾದಗಳನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ತಮ್ಮ ಆದೇಶವನ್ನು ನೀಡಿದ್ದಾರೆ.
ಮಧ್ಯಂತರ ಆದೇಶ ಅರ್ಜಿಯಲ್ಲಿ ನಿರ್ಧರಿಸಲು ನ್ಯಾಯಾಲಯವು ಎರಡು ಪ್ರಶ್ನೆಗಳನ್ನು ಎತ್ತಿದ್ದು, ಮೊದಲನೆಯದು ದೆಹಲಿಯಲ್ಲಿ ಈ ಮೊಕದ್ದಮೆಯನ್ನು ನಿರ್ವಹಿಸಬಹುದೇ? ಮತ್ತು ಎರಡನೇಯದು ಈ ಸರಣಿಯಲ್ಲಿ ವಾಂಖೆಡೆಯ ಚಿತ್ರಣವನ್ನು ಒಟ್ಟಾರೆಯಾಗಿ ನೋಡಿದಾಗ, ಮೊದಲ ನೋಟ ವಾಂಖೆಡೆಗೆ ಕ್ರಮ ಕೈಗೊಳ್ಳಬಹುದಾದ ಹಾನಿಯಾಗಿ ಬದಲಾಗುತ್ತದೆಯೇ? ಎಂದು ಪ್ರಶ್ನೆ ಮಾಡಿತು.
ವಾಂಖೆಡೆ ಪರ ವಾದ ಮಂಡಿಸಿದ ಹಿರಿಯ ವಕೀಲ ಜೆ ಸಾಯಿ ದೀಪಕ್, ಈ ಮೊಕದ್ದಮೆ ದೆಹಲಿಯಲ್ಲಿ ವಿಚಾರಣೆಗೆ ಅರ್ಹವಾಗಿದೆ ಮತ್ತು ಸಮೀರ್ ಅವರ ವಿರುದ್ಧದ ಹಲವು ರೀತಿಯ ಶಿಸ್ತು ಕ್ರಮಗಳು ಮತ್ತು ಪ್ರಕ್ರಿಯೆಗಳು ದೆಹಲಿಯಲ್ಲಿ ಬಾಕಿ ಇರುವುದರಿಂದ ಈ ಪ್ರಕರಣ ಇಲ್ಲಿಗೆ ಸಂಬಂಧಿಸಿದೆ ಎಂದು ವಾದಿಸಿದರು.
ವಾಂಖೆಡೆ ಪ್ರತಿಷ್ಠೆಗೆ ಧಕ್ಕೆ ತರುವಂತಹ ಲೇಖನಗಳನ್ನು ಪ್ರಕಟಿಸಿದ ಪ್ರಮುಖ ಮಾಧ್ಯಮ ಸಂಸ್ಥೆಗಳ ಪ್ರಧಾನ ಕಚೇರಿಗಳು ದೆಹಲಿಯಲ್ಲಿವೆ. ಇದು ಮಾನನಷ್ಟ ಮೊಕದ್ದಮೆ ಹೂಡಲು ಬಲವಾದ ಕಾರಣವಾಗಿದೆ. ವಾಂಖೆಡೆ ಸಂಬಂಧಿಕರು ದೆಹಲಿಯಲ್ಲಿ ನೆಲೆಸಿರುವುದರಿಂದ ಮತ್ತು ಘಟನೆಯ ಪರಿಣಾಮ ಇಲ್ಲಿಯೂ ಸದ್ದು ಮಾಡಿರುವುದರಿಂದ ನ್ಯಾಯವ್ಯಾಪ್ತಿಯು ದೆಹಲಿಗೆ ಒಳಪಡುತ್ತದೆ ಎಂದು ವಾದಿಸಿದ್ದಾರೆ.
ಈ ಹಿಂದೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪರ ವಕೀಲರ ವಾದವು ಈ ಪ್ರಕರಣದಲ್ಲಿ ಅತ್ಯಂತ ನಿರ್ಣಾಯಕವಾಗಿತ್ತು. ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಅವರು ಮಂಡಿಸಿದ ಅಂಶಗಳು ಈ ಮೊಕದ್ದಮೆಯನ್ನು ದೆಹಲಿಯಿಂದ ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದವು.
ಈ ಹಿಂದೆ, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಈ ಮೊಕದ್ದಮೆಯ ಪ್ರಾದೇಶಿಕ ನಿರ್ವಹಣೆಯನ್ನು ವಿರೋಧಿಸಿತ್ತು. ನಿರ್ಮಾಣ ಕಂಪನಿಯ ಪರವಾಗಿ ಹಾಜರಿದ್ದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್, ಇದು ಪ್ರಾದೇಶಿಕ ನ್ಯಾಯವ್ಯಾಪ್ತಿಯನ್ನು ಹೊಂದಿಲ್ಲ ಮತ್ತು ದೆಹಲಿಯ ಬದಲಿಗೆ ಬಾಂಬೆಯಲ್ಲಿ ಸಲ್ಲಿಸಬೇಕಾಗಿತ್ತು ಎಂದು ವಾದಿಸಿದ್ದರು.
ಹಿರಿಯ ವಕೀಲ ಕೌಲ್, ಈ ಮೊಕದ್ದಮೆಯು ದೆಹಲಿ ಹೈಕೋರ್ಟ್‌ನ ವ್ಯಾಪ್ತಿಗೆ ಬರುವುದೇ ಇಲ್ಲ. ಇದು ಸಂಪೂರ್ಣವಾಗಿ ಮುಂಬೈಗೆ ಸಂಬಂಧಿಸಿದ ವಿಷಯವಾಗಿದ್ದು, ಎಲ್ಲಿ ಘಟನೆ ನಡೆದಿದಿಯೋ, ಎಲ್ಲಿ ಪ್ರತಿವಾದಿಗಳು ವಾಸಿಸುತ್ತಾರೋ ಅಲ್ಲೇ ಮೊಕದ್ದಮೆ ಹೂಡಬೇಕು ಎಂದು ವಾದಿಸಿದ್ದರು.
ವಾಂಖೆಡೆ ಅವರು ಮಾನನಷ್ಟ ಮೊಕದ್ದಮೆಯನ್ನು ಸಲ್ಲಿಸಬೇಕಿದ್ದರೆ ಅದನ್ನು ಬಾಂಬೆ ಹೈಕೋರ್ಟ್ ಅಥವಾ ಮುಂಬೈನ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಬೇಕಿತ್ತು. ದೆಹಲಿಯಲ್ಲಿ ಮೊಕದ್ದಮೆ ಹೂಡಿರುವುದು ಕೇವಲ ಸಮಯ ವ್ಯರ್ಥ ಮಾಡುವ ಪ್ರಯತ್ನ ಎಂದರು.
ಹಿನ್ನಲೆ ಏನು?
ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಿರ್ದೇಶನದ ದಿ ಬ್ಯಾ***ಡ್ಸ್ಆಫ್ ಬಾಲಿವುಡ್ ಸರಣಿಯಲ್ಲಿ ಒಂದು ಪಾತ್ರವು ವಾಂಖೆಡೆ ಅವರನ್ನು ಹೋಲುವಂತಿದ್ದು, ಇದು ಅವರ ವೈಯಕ್ತಿಕ ಮತ್ತು ವೃತ್ತಿಪರ ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ನಿರ್ಮಿಸಲಾಗಿದೆ ಎಂದು ಆರೋಪ ಮಾಡಿದ್ದರು.
ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಪ್ರಸಾರವಾದ ಈ ಸಂಚಿಕೆ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನನಷ್ಟಕರ ಚಿತ್ರಣವಾಗಿದ್ದು, ನಿರ್ದೇಶಕರು 2 ಕೋಟಿ ರೂಗಳ ಪರಿಹಾರವನ್ನು ನೀಡಬೇಕು. ಅದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ದೇಣಿಗೆ ನೀಡುವುದಾಗಿ ತಿಳಿಸಿದ್ದರು (ಏಜೆನ್ಸೀಸ್).