ದೈವದ ಬಗ್ಗೆ ವ್ಯಂಗ್ಯವಾಡಿದ ರಣವೀರ್ ಸಿಂಗ್​ಗೆ ಶಾಕ್​: ಧುರಂಧರ್ ಸಿನಿಮಾಗೆ ಎದುರಾಯ್ತು ಸಂಕಷ್ಟ! Ranveer Singh

ನಟ ರಣವೀರ್ ಸಿಂಗ್​ ಮತ್ತು ಹುತಾತ್ಮ ಮೇಜರ್​ ಮೋಹಿತ್ ಶರ್ಮಾ
ನಟ ರಣವೀರ್ ಸಿಂಗ್​ ಮತ್ತು ಹುತಾತ್ಮ ಮೇಜರ್​ ಮೋಹಿತ್ ಶರ್ಮಾ
Published on

ಪ್ರಮುಖ ಮುಖ್ಯಾಂಶಗಳು

  • ಕಾಂತಾರ ಚಿತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಾಲಿವುಡ್​ ನಟ ರಣವೀರ್ ಸಿಂಗ್
  • ಸಾಮಾಜಿಕ ಮಾಧ್ಯಮಗಳಲ್ಲಿ ರಣವೀರ್ ಸಿಂಗ್​ ವಿರುದ್ಧ ಭಾರೀ ಆಕ್ರೋಶ
  • ರಣವೀರ್ ವಿವಾದಾತ್ಮಕ ಹೇಳಿಕೆಯಿಂದ ಧುರಂಧರ್​ ಸಿನಿಮಾಗೆ ಎದುರಾಯ್ತು ಸಂಕಷ್ಟ
  • ಅಭಿಮಾನಿಗಳ ಸಿನಿಮಾ ಬಹಿಷ್ಕಾರದ ಜೊತೆಗೆ ನ್ಯಾಯಾಲಯದಲ್ಲೂ ರಣವೀರ್​ ಚಿತ್ರಕ್ಕೆ ಹಿನ್ನಡೆ
ಮುಂಬೈ: ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಪ್ರಶಸ್ತಿ ಪ್ರದಾನ ವೇದಿಕೆಯ ಮೇಲೆ ಮಾತನಾಡುವಾಗ ಬ್ಲಾಕ್​ಬಸ್ಟರ್​ ಕಾಂತಾರ ಚಿತ್ರದ ಬಗ್ಗೆ ನಟ ರಣವೀರ್ ಸಿಂಗ್ ( Ranveer Singh ) ಮಾಡಿದ ಕಾಮೆಂಟ್‌ಗಳು ವಿವಾದದ ಸ್ವರೂಪ ಪಡೆದುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ರಣವೀರ್ ಮತ್ತು ಧುರಂಧರ್​ ಸಿನಿಮಾ ತಂಡ ಭಾರಿ ಮುಖಭಂಗ ಅನುಭವಿಸಬೇಕಾಯಿತು.
ಸಾಮಾಜಿಕವಾಗಿ ಕ್ಷಮೆ ಕೇಳದೇ ಇದ್ದರೆ ಸಿನಿಮಾವನ್ನು ನಿಷೇಧಿಸುತ್ತೇವೆ ಎಂದು ಕಾಂತಾರ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಈಗ ಇನ್ನೊಂದು ಸಂಕಷ್ಟ ಧುರಂಧರ್ ಚಿತ್ರ ತಂಡಕ್ಕೆ ಎದುರಾಗಿದೆ. ಅದೇನ್ನೆನ್ನುವ ಸಂಪೂರ್ಣ ವಿವರ ಇಲ್ಲಿದೆ.
ಧುರಂಧರ್​ ಸಿನೆಮಾವು ಪಾಕಿಸ್ತಾನದಲ್ಲಿ ನಿಯೋಜಿತನಾಗಿರುವ ಗೂಢಾಚಾರನ ಸುತ್ತ ಹೆಣೆದಿರುವ ಕಥೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಆ ಗೂಢಾಚಾರನ ಪಾತ್ರವು ಭಾರತದ ಮಾಜಿ ಸೈನಿಕ ಮೇಜರ್ ಮೋಹಿತ್ ಶರ್ಮಾ ಅವರ ಜೀವನಗಾಥೆ ಎಂದು ಎಲ್ಲಾ ಕಡೆ ಸದ್ದಾಗುತ್ತಿದೆ. ಇದರ ಬೆನ್ನಲ್ಲೇ ಮೇಜರ್​ ಮೋಹಿತ್ ಶರ್ಮಾ ಅವರ ಪಾಲಕರು ದೆಹಲಿ ಹೈಕೋರ್ಟ್​ ಮೆಟ್ಟಿಲು ಏರಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ತಮ್ಮ ಮಗನ ಕುರಿತು ನಮ್ಮ ಅನುಮತಿ ಇಲ್ಲದೇ ಸಿನಿಮಾ ಮಾಡಿದ್ದಾರೆ. ಇದರಿಂದ ನಮಗೆ ತುಂಬಾ ಬೇಸರವಾಗಿದೆ ಎಂದು ಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ.
ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ ದತ್ತಾ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಮೇಜರ್ ಮೋಹಿತ್ ಶರ್ಮಾ ಅವರ ಪಾಲಕರ ಮನವಿಯನ್ನು ಗಮನದಲ್ಲಿಟ್ಟುಕೊಂಡು ಸಿನಿಮಾಗೆ ಪ್ರಮಾಣೀಕರಣ ನೀಡಿ ಎಂದು ಸೂಚನೆ ನೀಡಿದ್ದಾರೆ.

ಯಾರು ಈ ಮೇಜರ್​ ಮೋಹಿತ್ ಶರ್ಮಾ ?

ಮೇಜರ್​ ಮೋಹಿತ್ ಶರ್ಮಾ ಪಾರಾ ಸ್ಪೇಷಲ್ ತಂಡದಲ್ಲಿದ್ದ ಒಬ್ಬ ಅಧಿಕಾರಿಯಾಗಿದ್ದು, ಇವರು 2009ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ವೀರ ಮರಣ ಹೊಂದಿದರು. ಇವರ ಶೌರ್ಯಯುತ ಬಲಿದಾನಕ್ಕೆ ಮರಣೋತ್ತರ ಆಶೋಕ ಚಕ್ರ ಪ್ರಶಸ್ತಿಯನ್ನು ನೀಡಲಾಗಿದೆ. ಇದಕ್ಕೂ ಮೊದಲು ಇವರು ಪಾಕಿಸ್ತಾನದಲ್ಲಿ ಗೂಢಾಚಾರರಾಗಿ ಪಾಕಿಸ್ತಾನದ ರಹಸ್ಯಗಳನ್ನು ಭಾರತಕ್ಕೆ ಒದಗಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಆದರೆ, ಈ ವಿವಾದದ ಕುರಿತು ಮೌನ ಮುರಿದಿರುವ ಧುರಂಧರ್ ನಿರ್ದೇಶಕ ಆದಿತ್ಯ ಧರ್, ಇದು ಖಂಡಿತವಾಗಿಯು ಮೇಜರ ಮೋಹಿತ್ ಶರ್ಮಾ ಅವರ ಜೀವನ ಚರಿತ್ರೆಯಲ್ಲ. ಇದು ನೈಜ ಘಟನೆಗಳ ಆಧಾರದಲ್ಲಿ ನಿರ್ಮಿಸಲಾದ ಸಿನಿಮಾವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಿನಿಮಾದಲ್ಲಿ ಬಹು ತಾರಾಗಣವಿದ್ದು, ರಣವೀರ ಸಿಂಗ್ ಜತೆ ಅಕ್ಷಯ್ ಖನ್ನಾ, ಸಂಜಯ್ ದತ್ತ್, ಆರ್. ಮಾಧವನ್, ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಡಿಸೆಂಬರ್ 5 ರಂದು ತೆರೆಕಾಣಲಿರುವ ಈ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುತ್ತದೆಯೇ? ಅಥವಾ ಮಖಾಡೆ ಮಲಗುತ್ತದೆಯೇ? ಎಂದು ಕಾದುನೋಡಬೇಕಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net