6 ತಿಂಗಳ ಪ್ರೀತಿ, 8 ವರ್ಷಗಳ ದಾಂಪತ್ಯ: ನಿಕ್ ಅವರ ಪ್ರಾಮಾಣಿಕತೆಯೇ ನನ್ನ ಶಕ್ತಿ ಎಂದ ಪ್ರಿಯಾಂಕಾ! Priyanka Chopra

Priyanka Chopra(ಚಿತ್ರ Instagram)
Priyanka Chopra(ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ ಸದಾ ಸುದ್ಧಿಯಲ್ಲಿರುವ ಸ್ಟಾರ್ ಜೋಡಿ
  • ದಾಂಪತ್ಯದ ಬಗ್ಗೆ ಇತ್ತೀಚೆಗೆ ಅನೇಕ ರೀತಿಯ ವದಂತಿಗಳು ಹರಿದಾಡುತ್ತಿರುವುದನ್ನು ಕೇಳಿರಬಹುದು
  • ಸಾರ್ವಜನಿಕ ಜೀವನದಲ್ಲಿರುವಾಗ ಜನರು ತಮ್ಮ ಬಗ್ಗೆ ಆಡುವ ಮಾತುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ
  • ಮದುವೆಯಾದ ಹೊಸತರಲ್ಲಿ ಟೀಕೆಗಳು ನೋವುಂಟು ಮಾಡಿದರೂ, ಆ ವಿಚಾರಗಳ ಬಗ್ಗೆ ಕೇಳಿಯೂ ಕೇಳದಂತೆ ಇದ್ದೇವೆ
Priyanka Chopra: ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ ಸದಾ ಸುದ್ಧಿಯಲ್ಲಿರುವ ಸ್ಟಾರ್ ಜೋಡಿ. ಅವರ ದಾಂಪತ್ಯದ ಬಗ್ಗೆ ಇತ್ತೀಚೆಗೆ ಅನೇಕ ರೀತಿಯ ವದಂತಿಗಳು ಹರಿದಾಡುತ್ತಿರುವುದನ್ನು ನಾವು ಗಮನಿಸಿರಬಹುದು. ಈ ವಿಚಾರದ ಬಗ್ಗೆ ಪ್ರಿಯಾಂಕ ಚೋರ್ಪಾ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಸಾರ್ವಜನಿಕ ಜೀವನದಲ್ಲಿರುವಾಗ ಜನರು ತಮ್ಮ ಬಗ್ಗೆ ಆಡುವ ಮಾತುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮದುವೆಯಾದ ಹೊಸತರಲ್ಲಿ ಟೀಕೆಗಳು ನೋವುಂಟು ಮಾಡುತ್ತಿದ್ದರೂ, ಆ ವಿಚಾರಗಳ ಬಗ್ಗೆ ಕೇಳಿಯೂ ಕೇಳದಂತೆ ಇರುತ್ತಿದ್ದೆವು ಎಂದಿದ್ದಾರೆ.
ಮದುವೆಯಾದ ಆರಂಭದಲ್ಲಿ ಜನರಿಂದ ಬರುತ್ತಿದ್ದ ನೆಗಟಿವ್​ ಕಾಮೆಂಟ್​​​ಗಳು, ಮದುವೆಯ ಕುರಿತಾದ ಸಂಶಯಗಳು ತುಂಬಾ ನೋವುಂಟು ಮಾಡುತ್ತಿತ್ತು ಎಂದು ಬಹಿರಂಗಪಡಿಸಿರುವ ಪ್ರಿಯಾಂಕಾ, ವಿಶೇಷವಾಗಿ, ಅವರ ವಯಸ್ಸಿನ ಅಂತರವನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಚರ್ಚೆಗಳು ಬಹಳ ಘಾಸಿ ಮಾಡಿದವು ಎಂದಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಈ ರೀತಿಯ ಆರೋಪಗಳು ವೈಯಕ್ತಿಕ ಜೀವನದ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿರುತ್ತವೆ, ಅದಕ್ಕೆ ದಂಪತಿಗಳಾದವರು ಅವಕಾಶ ನೀಡಬಾರದು ಎಂದು ಪ್ರಿಯಾಂಕಾ ಮತ್ತು ನಿಕ್ ಒಮ್ಮತದ ನಿರ್ಧಾರವನ್ನು ತೆಗೆದುಕೊಂಡಿದ್ದರಿಂದಲೇ ಈ ಬಂಧ ಗಟ್ಟಿಯಾಗಿದ್ದು, ಪರಸ್ಪರ ನಂಬಿಕೆ ಮತ್ತು ಪ್ರೀತಿಯೇ ಅವರ ಶಕ್ತಿ ಎಂದು ತಿಳಿಸಿದ್ದಾರೆ.
ಸದ್ಯ ಮದುವೆಯಾಗಿ ಸುಮಾರು 8 ವರ್ಷಗಳು ಕಳೆದಿದ್ದು, ಹೊರಗಿನ ಜಗತ್ತು ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು ಎಂದು ಕಾಯುತ್ತಿದೆ, ಆದರೆ ನಮ್ಮ ಆಯ್ಕೆ ಮನೆಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವುದಾಗಿದೆ ಎಂದರು.
ದಾಂಪತ್ಯದಲ್ಲಿ ಜನರನ್ನು ಯಾವ ವಿಷಯ ತಪ್ಪು ದಾರಿಗೆ ಎಳೆದಿದೆ ಎನ್ನುವುದು ನನಗೆ ತಿಳಿದಿಲ್ಲ. ಎರಡು ಭಿನ್ನ ದೇಶ, ಧರ್ಮ ಮತ್ತು ವಯಸ್ಸಿನ ವ್ಯತ್ಯಾಸವಿರುವಾಗ ಸಮಾಜವು ಅದನ್ನು ಒಪ್ಪಿಕೊಳ್ಳಲು ಖಂಡಿತವಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ನಾವಿಬ್ಬರೂ ಪರಸ್ಪರ ಅರ್ಥಮಾಡಿಕೊಂಡೆವು. ಈಗ ಅದು ಬಾತುಕೋಳಿಯ ಬೆನ್ನಿನಿಂದ ಬಂದ ನೀರಿನಂತೆ ಎಂದು ಹೇಳುವ ಮೂಲಕ ವದಂತಿಗಳಿಗೆ ಕಿವಿ ಕೊಡುವುದನ್ನು ನಿಲ್ಲಿಸಿದ್ದಾರೆ.
ಚೋಪ್ರಾ ತಮ್ಮ ಸಂಬಂಧ ಎಷ್ಟು ಬೇಗನೆ ಮುಂದುವರೆಯಿತು ಎನ್ನುವುದರ ಕುರಿತಾಗಿ ಮಾತನಾಡಿದ್ದು, ನಾವಿಬ್ಬರೂ ಭೇಟಿಯಾದ ಕೇವಲ ಆರು ತಿಂಗಳಿಗೆ ವಿವಾಹವಾದೆವು. ಈ ನಿರ್ಧಾರ ಅನೇಕರನ್ನು ಆಕರ್ಷಿತಗೊಳಿಸಿತು. ನಿಕ್​ ತುಂಬಾ ಪ್ರಾಮಾಣಿಕರು, ಅವರು ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿದ್ದಾರೆ ಎಂದಿದ್ದಾರೆ, ಇದು ಪ್ರಿಯಾಂಕಾ ಹಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳುವಲ್ಲಿ ನಿಕ್ ವಹಿಸಿರಬಹುದುದಾದ ದೊಡ್ಡ ಪಾತ್ರವನ್ನು ಪ್ರತಿಬಿಂಬಿಸುತ್ತದೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ 2018 ರಲ್ಲಿ ರಾಜಸ್ಥಾನದಲ್ಲಿ ಕ್ರಿಶ್ಚಿಯನ್​ ಮತ್ತು ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಆ ಸಮಯದಲ್ಲಿ ಅವರಿಬ್ಬರ ನಡುವಿನ 10 ವರ್ಷಗಳ ವಯಸ್ಸಿನ ವ್ಯತ್ಯಾಸವು (ಚೋಪ್ರಾಗೆ 36, ನಿಕ್​ 26) ಆಗಿನ ಕಾಲಕ್ಕೆ ದೊಡ್ಡ ಚರ್ಚಾ ವಿಷಯವಾಗಿತ್ತು. ಈ ದಂಪತಿ ಜನವರಿ 2022 ರಲ್ಲಿ ತಮ್ಮ ಮಗಳು ಮಾಲ್ಟಿ ಮೇರಿ ಚೋಪ್ರಾ ಜೋನಾಸ್‌ಳನ್ನು ಸ್ವಾಗತಿಸಿದರು.
ಕೆಲಸದ ವಿಷಯಕ್ಕೆ ಬಂದರೆ, ಚೋಪ್ರಾ ದಿ ಬ್ಲಫ್, ಸಿಟಾಡೆಲ್ ಸೀಸನ್ 2, ಹೆಡ್ಸ್ ಆಫ್ ಸ್ಟೇಟ್, ವಾರಣಾಸಿಯಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net