SHAKIRA: 19 ವರ್ಷಗಳ ಬಳಿಕ ಭಾರತಕ್ಕೆ ಬರ್ತಿದಾಳೆ ಪಾಪ್ ಗಾಯಕಿ ಶಕೀರಾ

ಶಕೀರಾ
ಶಕೀರಾ
Published on

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್​ 10, 15ರಂದು ಸಂಗೀತ ಕಾರ್ಯಕ್ರಮ ನೀಡಲಿರುವ ಗಾಯಕಿ
  • ಮುಂಬೈ, ನವದೆಹಲಿಯಲ್ಲಿ ಕಾರ್ಯಕ್ರಮ ಆಯೋಜನೆ
  • ಒಂದೂವರೆ ತಿಂಗಳ ಮುಂಚೆಯೇ ಆನ್ಲೈನ್ ಟಿಕೆಟ್ ಸೇಲ್ ಜೋರು
‘ಕ್ವೀನ್ ಆಫ್​ ಲ್ಯಾಟಿನ್ ಮ್ಯೂಸಿಕ್’ ಎಂದೇ ಪ್ರಸಿದ್ಧಿಯಾಗಿರುವ ಶಕೀರಾ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಪಾಪ್ ಗಾಯಕಿ. ನಾಲ್ಕು ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ‘ಹಿಪ್ಸ್ ಡೋಂಟ್ ಲೈ’, ‘ವಾಕಾ ವಾಕಾ’, ‘ವೆನೆವರ್ ವೆನೆವರ್’ ಸೇರಿ 100ಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಜತೆಗೆ ಅವರ ಹಲವು ಅಲ್ಬಂ ಸಾಂಗ್‌ಗಳು ಜಗತ್ಪ್ರಸಿದ್ಧಿಯಾಗಿವೆ. ಹಾಗೆಯೇ ಜಗತ್ತಿನಾದ್ಯಂತ ಗಾಯಕಿ ನಡೆಸಿಕೊಡುವ ಸಂಗೀತ ಕಾರ್ಯಕ್ರಮಗಳಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇಂತಹ ಜನಪ್ರಿಯ ಪಾಪ್ ಗಾಯಕಿ ಶಕೀರಾ ಇದೀಗ ಎರಡು ದಿನಗಳ ಕಾಲ ಭಾರತಕ್ಕೆ ಬರಲು ಸಿದ್ಧರಾಗುತ್ತಿದ್ದಾರೆ. ಇದೇ ಏಪ್ರಿಲ್ 10 ಮತ್ತು 15ರಂದು ಅವರು ಭಾರತದಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಏ. 10ರಂದು ಮುಂಬೈನ ಮಹಾಲಕ್ಷ್ಮೀ ರೇಸ್‌ಕೋರ್ಸ್‌ನಲ್ಲಿ ಮತ್ತು 15ರಂದು ನವದೆಹಲಿಯ ಜವಾಹರ್ ಲಾಲ್ ನೆಹರು ಸ್ಟೇಡಿಯಂನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಇನ್ನು ಪಾಪ್ ಗಾಯಕಿಯ ಎರಡು ದಿನಗಳ ಭಾರತ ಪ್ರವಾಸ ವಿಚಾರ ಅಭಿಮಾನಿಗಳ ಖುಷಿಗೆ ಕಾರಣವಾಗಿದ್ದು, ನೆಚ್ಚಿನ ಗಾಯಕಿಯನ್ನು ಕಣ್ತುಂಬಿಕೊಳ್ಳಲು ಆನ್‌ಲೈನ್ ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಟಿಕೆಟ್ ಬೆಲೆ ಕೂಡ ಗಗನಕ್ಕೇರಿದ್ದು, ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತಿವೆ ಎಂದು ತಿಳಿದುಬಂದಿದೆ. ಬರೋಬ್ಬರಿ 19 ವರ್ಷಗಳ ಬಳಿಕ ಶಕೀರಾ ಭಾರತಕ್ಕೆ ಮರಳುತ್ತಿದ್ದಾರೆ. ಈ ಹಿಂದೆ 2007ರಲ್ಲಿ ಮುಂಬೈನಲ್ಲಿ ಕಾರ್ಯಕ್ರಮ ನೀಡಿದ್ದರು. ಭಾರತಕ್ಕೆ ಆಗಮಿಸುತ್ತಿರುವ ಬಗ್ಗೆ ಶಕೀರಾ ಕೂಡ ಉತ್ಸುಕರಾಗಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net