ಭಾರತದಿಂದ "ಹೋಮ್ಬೌಂಡ್' ಚಿತ್ರವನ್ನು ಅಧಿಕೃತವಾಗಿ ಆಯ್ಕೆ ಮಾಡಿ ಆಸ್ಕರ್ಗೆ ಕಳುಹಿಸಲಾಗಿತ್ತು. ಆದರೆ, ಆ ಸಿನಿಮಾ ನಾಮಿನೇಷನ್ ಹಂತದಲ್ಲಿಯೇ ಹೊರಗುಳಿಯಿತು. ಜತೆಗೆ ಕನ್ನಡದ "ಕಾಂತಾರ ಚಾಪ್ಟರ್ 1', "ತಾನ್ವಿ ದ ಗ್ರೇಟ್', "ಮಹಾವತಾರ್ ನರಸಿಂಹ', "ಟೂರಿಸ್ಟ್ ಫ್ಯಾಮಿಲಿ', "ಸಿಸ್ಟರ್ ಮಿಡ್ನೈಟ್' ಸೇರಿ ಒಟ್ಟು 26 ಚಿತ್ರಗಳನ್ನು ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗೆ ಕಳುಹಿಸಲಾಗಿತ್ತು. ಯಾವ ಭಾರತೀಯ ಚಿತ್ರಕ್ಕೂ ಈ ಬಾರಿ ಆಸ್ಕರ್ನಲ್ಲಿ ಮಣೆ ಹಾಕಿಲ್ಲ. ಆದರೂ, ಭಾರತೀಯರು ಹೆಮ್ಮೆಪಡುವಂತಹ ಎರಡು ವಿಷಯಗಳಿಗೆ ಈ ಬಾರಿಯ ಅಕಾಡೆಮಿ ಅವಾರ್ಡ್ಸ್ ಸಾಯಾಗಿದೆ. ಹೌದು, ಅತ್ಯುತ್ತಮ ಲೈವ್ ಆ್ಯಕ್ಷನ್ ಕಿರುಚಿತ್ರ ವಿಭಾಗದಲ್ಲಿ ಸ್ಯಾಮ್ ಎ. ಡೇವಿಸ್ & ಜ್ಯಾಕ್ ಪಿಯಟ್ ನಿರ್ದೇಶನದ "ದ ಸಿಂಗರ್ಸ್' ಮತ್ತು ಅಲೆಕ್ಸಾಂಡ್ರೆ ಸಿಂಗ್ &-ನಟಾಲೀ ಮುಸ್ಟೇಟಾ ನಿರ್ದೇಶನದ "ಟು ಪೀಪಲ್ ಎಕ್ಸ್ಚೇಂಜಿಂಗ್ ಸಲೈವ' ಶಾರ್ಟ್ ಫಿಲಂಗಳು ಪ್ರಶಸ್ತಿ ಗಳಿಸಿವೆ. ವಿಶೇಷ ಅಂದರೆ ಅಲೆಕ್ಸಾಂಡ್ರೆ ಸಿಂಗ್ ಭಾರತ ಮೂಲದವರು. ಫ್ರಾನ್ಸ್ನಲ್ಲಿ ಭಾರತೀಯ ಮೂಲದ ಕುಟುಂಬಕ್ಕೆ ಜನಿಸಿದ ಅವರು ಬ್ರಿಟನ್ನಲ್ಲಿ ನೆಲೆಸಿದ್ದಾರೆ. ಹಾಗೇ 13 ವರ್ಷಗಳ ಬಳಿಕ ಒಂದೇ ವಿಭಾಗದಲ್ಲಿ ಎರಡು ಚಿತ್ರಗಳಿಗೆ ಪ್ರಶಸ್ತಿ ನೀಡಿರುವುದು ವಿಶೇಷ. ಈ ಹಿಂದೆ 2013ರಲ್ಲಿ ಅತ್ಯುತ್ತಮ ಧ್ವನಿ ವಿಭಾಗದಲ್ಲಿ "ಸ್ಕೈಫಾಲ್' ಮತ್ತು "ಜೀರೋ ಡಾರ್ಕ್ ಥರ್ಟಿ' ಚಿತ್ರಗಳು ಪ್ರಶಸ್ತಿ ಹಂಚಿಕೊಂಡಿದ್ದವು.