ಸ್ಯಾಂಡಲ್‌ವುಡ್‌ನಲ್ಲಿ 'ಅಶ್ಲೀಲ' ಕಿಚ್ಚು: ಪ್ರೇಮ್ ಕೆಡಿ ಸಿನಿಮಾದ ಹಾಡಿನ ವಿರುದ್ಧ ತಿರುಗಿಬಿದ್ದ ನೆಟ್ಟಿಗರು! | KD The Devil

KD: The Devil
KD: The Devil
Published on
ಬೆಂಗಳೂರು: ಸ್ಯಾಂಡಲ್‌ವುಡ್‌ನ 'ಜೋಗಿ' ಖ್ಯಾತಿಯ ನಿರ್ದೇಶಕ ಪ್ರೇಮ್ ಅವರ ಮುಂಬರುವ ಕೆಡಿ: ದಿ ಡೆವಿಲ್ (KD) ಚಿತ್ರದ ಹಾಡೊಂದರ ಸಾಹಿತ್ಯ ಮತ್ತು ಚಿತ್ರೀಕರಣ ಈಗ ರಾಷ್ಟ್ರಮಟ್ಟದಲ್ಲಿ ಭಾರಿ ವಿವಾದಕ್ಕೆ ನಾಂದಿ ಹಾಡಿದೆ. ಈ ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನಲ್ಲಿ ಬಳಕೆಯಾಗಿರುವ ಪದಗಳು ಅಶ್ಲೀಲತೆಯಿಂದ ಕೂಡಿದ್ದು, ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಸಾರ್ವಜನಿಕರು ಹಾಗೂ ಸಾಮಾಜಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿನ ವಿರುದ್ಧ ಅಭಿಯಾನ ಆರಂಭವಾಗಿದ್ದು, ಪ್ರಮುಖವಾಗಿ 'Gems of Bollywood' ನಂತಹ ವೇದಿಕೆಗಳು ಈ ಹಾಡಿನ ವಿರುದ್ಧ ದೂರು ದಾಖಲಿಸಿವೆ. "ಇಂತಹ ಅಸಭ್ಯ ಸಾಹಿತ್ಯವಿರುವ ಹಾಡಿಗೆ ಸೆನ್ಸಾರ್ ಮಂಡಳಿ (Censor Board) ಹೇಗೆ ಅನುಮತಿ ನೀಡಿತು?" ಎಂಬ ನೇರ ಪ್ರಶ್ನೆಯನ್ನು ಸಾರ್ವಜನಿಕರು ಎಸೆದಿದ್ದಾರೆ. ಸಂಸ್ಕೃತಿಯ ಹೆಸರಿನಲ್ಲಿ ಇಂತಹ ಹಾಡುಗಳನ್ನು ಬಿಡುಗಡೆ ಮಾಡುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಮಕ್ಕಳು ಮತ್ತು ಮಹಿಳೆಯರ ಮೇಲೆ ಪ್ರಭಾವ

ಈ ವಿವಾದಾತ್ಮಕ ಹಾಡು ಮಕ್ಕಳ ಮನಸ್ಸಿನ ಮೇಲೆ ಮತ್ತು ಹೆಣ್ಣು ಮಕ್ಕಳ ಸುರಕ್ಷತೆಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. "ಇಂತಹ ಹಾಡುಗಳು ಪರೋಕ್ಷವಾಗಿ 'ರೇಪ್ ಕಲ್ಚರ್' (Rape Culture) ಅಥವಾ ಅತ್ಯಾಚಾರ ಮನೋಭಾವವನ್ನು ಉತ್ತೇಜಿಸುವುದಿಲ್ಲವೇ?" ಎಂಬ ಕಳವಳವನ್ನು ಸಾಮಾಜಿಕ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಮತ್ತು ಏಜೆನ್ಸಿಗಳು ಈ ಕೂಡಲೇ ಮಧ್ಯಪ್ರವೇಶಿಸಿ ಹಾಡನ್ನು ನಿಷೇಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಒಂದೇ ಧ್ವನಿಯಲ್ಲಿ ಪ್ರತಿಭಟನೆ

ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಸೇರಿದಂತೆ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಈ ಹಾಡಿನ ವಿರುದ್ಧ ಒಂದಾಗಿದ್ದಾರೆ. "ಕಲೆ ಎಂಬುದು ಸಮಾಜವನ್ನು ಸುಧಾರಿಸಬೇಕೇ ಹೊರತು ಹದಗೆಡಿಸಬಾರದು. ಇಂತಹ 'ಫಿಲ್ತಿ' (ಕೊಳಕು) ಹಾಡುಗಳ ವಿರುದ್ಧ ಎಲ್ಲರೂ ಧ್ವನಿ ಎತ್ತಲೇಬೇಕು" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್‌ಟ್ಯಾಗ್ ಅಭಿಯಾನ ತೀವ್ರಗೊಂಡಿದೆ.
ನಿರ್ದೇಶಕ ಪ್ರೇಮ್ ಈ ವಿವಾದದ ಬಗ್ಗೆ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲವಾದರೂ, ಚಿತ್ರತಂಡದ ಮೇಲೆ ಒತ್ತಡ ಹೆಚ್ಚುತ್ತಿದೆ. ಸೆನ್ಸಾರ್ ಮಂಡಳಿಯು ಈ ಹಾಡನ್ನು ಮರುಪರಿಶೀಲನೆಗೆ ಒಳಪಡಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕೆಡಿ ದಿ ಡೆವಿಲ್

ಕೆಡಿ: ದಿ ಡೆವಿಲ್ ಕನ್ನಡದ ಸಾಹಸಮಯ ಚಿತ್ರವಾಗಿದ್ದು, ಇದನ್ನು ನಿರ್ದೇಶಕ ಪ್ರೇಮ್ ನಿರ್ದೇಶಿಸಿದ್ದಾರೆ. 1970ರ ದಶಕದ ಬೆಂಗಳೂರಿನಲ್ಲಿ ನಡೆಯುವ ಈ ಚಿತ್ರವು, ಸಣ್ಣ ಅಪರಾಧಿಯೊಬ್ಬರು ದರೋಡೆಕೋರರಾಗುವ ಪ್ರಯಾಣದ ಸುತ್ತಲಿನ ನಿಜ ಜೀವನದ ಘಟನೆಗಳನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಧ್ರುವ ಸರ್ಜಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ವಿ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಮತ್ತು ಜಿಶು ಸೇನ್‌ಗುಪ್ತಾ ಪೋಷಕ ಪ್ರಕರಣದ ಭಾಗವಾಗಿದ್ದಾರೆ.ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net