20 ಎಲ್ಲಿ, 36 ಎಲ್ಲಿ? ಮಧುಬಾಲಾ ಬಯೋಪಿಕ್​ ಚಿತ್ರಕ್ಕೆ 'ಧುರಂಧರ್'​ ಬ್ಯೂಟಿ ಬೇಡವೇ ಬೇಡವೆಂದ ನೆಟ್ಟಿಗರು!

ನಟಿ ಸಾರಾ ಅರ್ಜುನ್​, ಹಿರಿಯ ನಟಿ ಮಧುಬಾಲಾ
ನಟಿ ಸಾರಾ ಅರ್ಜುನ್​, ಹಿರಿಯ ನಟಿ ಮಧುಬಾಲಾ
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ ಹಿರಿಯ ನಟಿ ಮಧುಬಾಲಾ ಬಯೋಪಿಕ್​ಗೆ ಧುರಂಧರ್ ಬ್ಯೂಟಿ ಆಯ್ಕೆ?
  • ಸಾರಾ ಅರ್ಜುನ್​ ಆಯ್ಕೆಯ ಬಗ್ಗೆ ಅನೇಕರ ಅಸಮಾಧಾನ
ಮುಂಬೈ: ಬಾಲಿವುಡ್ ಸ್ಟಾರ್ ಹೀರೋ ರಣವೀರ್ ಸಿಂಗ್ ನಟನೆಯ ಹಾಗೂ ಸೆನ್ಸೇಷನಲ್ ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಎರಡೂ ಭಾಗಗಳು ಇದೀಗ ಬ್ಲಾಕ್​ಬಸ್ಟರ್​ ಹಿಟ್​ ಸಾಲಿಗೆ ಸೇರ್ಪಡೆಯಾಗಿದ್ದು, ದೇಶಿಯ ಮತ್ತು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಚಿತ್ರವು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಈ ಚಿತ್ರದಲ್ಲಿ ರಣವೀರ್​ಗೆ ನಾಯಕಿಯಾಗಿ ಮಿಂಚಿದ ಯುವ ನಟಿ ಸಾರಾ ಅರ್ಜುನ್​ಗೆ ಸದ್ಯ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆ ಪೈಕಿ ಹಿರಿಯ ನಟಿಯ ಬಯೋಪಿಕ್​ ಕೂಡ ಒಂದು.
ಹಲವಾರು ಅವಕಾಶಗಳ ನಡುವೆ ಚಿಕ್ಕ ವಯಸ್ಸಿಗೆ ದೊಡ್ಡ ಜವಾಬ್ದಾರಿಯೊಂದು ಸಾರಾ ಅರ್ಜುನ್​ರನ್ನು ಹುಡುಕಿಕೊಂಡು ಬಂದಿದೆ. ಅದು ಭಾರತೀಯ ಬೆಳ್ಳಿ ಪರದೆಯ ದಂತಕಥೆ, ಹಿರಿಯ ನಟಿ ಮಧುಬಾಲಾ ಅವರ ಜೀವನ ಚರಿತ್ರೆಯಲ್ಲಿ ನಟಿಸುವ ಅಪರೂಪದ ಅವಕಾಶ ಸಾರಾಗೆ ಸಿಕ್ಕಿದೆ ಎಂಬ ವರದಿಗಳು ಕಳೆದ ಒಂದೆರೆಡು ದಿನಗಳಿಂದ ಜಾಲತಾಣವನ್ನು ಸುತ್ತುವರೆದಿವೆ. ಈ ವಿಷಯ ತಿಳಿದ ಅನೇಕರು ಹುಬ್ಬೇರಿಸಿದ್ದು, ಸಾಕಷ್ಟು ಟಾಪ್​ ಹಾಗೂ ಅನುಭವಿ ನಟಿಯರ ಮಧ್ಯೆ ಧುರಂಧರ್ ಬ್ಯೂಟಿಗೆ ಈ ಅವಕಾಶ ಏಕೆ? ಎಂಬ ಪ್ರಶ್ನೆಗಳನ್ನು ಚರ್ಚೆಗೆ ತಂದಿದ್ದಾರೆ.
ಹಲವು ಸಿನಿ ಮೂಲಗಳು ಸಾರಾ ಅರ್ಜುನ್​ ಅವರು ಮಧುಬಾಲಾ ಪಾತ್ರದಲ್ಲಿ ನಟಿಸಲಿದ್ದಾರೆ ಎಂದಿವೆ. ಈ ಬಯೋಪಿಕ್​ ಚಿತ್ರಕ್ಕೆ ಅವರೇ ನಾಯಕಿ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಕೆಂಡವಾದ ನೆಟ್ಟಿಗರು, ಈಕೆಯ ವಯಸ್ಸು 20. ಅವರ ವಯಸ್ಸು 36. ಹೀಗಿರುವಾಗ, ಎಲ್ಲಿಂದ ಎಲ್ಲಿಗೆ ಹೋಲಿಕೆ? ಇದ್ಯಾವುದು ಸರಿ ಕಾಣುವುದಿಲ್ಲ. ಆಕೆ ಯಾವ ಆ್ಯಂಗಲ್​ನಿಂದ ಹಿರಿಯ ನಟಿಯನ್ನು ಹೋಲುತ್ತಾರಾ? ಎಂಬ ಅಭಿಪ್ರಾಯ, ಅನಿಸಿಕೆಗಳು ವ್ಯಕ್ತವಾಗಿವೆ. ಒಟ್ಟಾರೆ, ಅವರ ಪ್ರಕಾರ, ಸಾರಾ ಈ ಪಾತ್ರಕ್ಕೆ ಸರಿ ಹೊಂದುವುದಿಲ್ಲ. ಆಕೆಯ ಬದಲಿಗೆ ಬೇರೆ ಯಾರಿಗಾದರೂ ಅವಕಾಶ ಕೊಡಿ ಎಂಬ ಮಾತುಗಳು ಕೇಳಿಬಂದಿರುವುದು ಗಮನಾರ್ಹ.
ಪಿಂಕ್ವಿಲ್ಲಾ ವರದಿಯ ಪ್ರಕಾರ, ಸಾರಾ ನಟಿಸಲಿರುವ ಮುಂದಿನ ಚಿತ್ರ ಬಹುನಿರೀಕ್ಷಿತ ಮಧುಬಾಲಾ ಅವರ ಬಯೋಪಿಕ್​ ಎನ್ನಲಾಗಿದೆ. ಭಾರತೀಯ ಸಿನಿ ಇತಿಹಾಸದಲ್ಲಿ ಶ್ರೇಷ್ಠ ಮತ್ತು ಅತ್ಯುತ್ತಮ ನಟಿಯರಲ್ಲಿ ಒಬ್ಬರಾದ ಹಿರಿಯ ನಟಿ, 1950ರ ದಶಕದಲ್ಲಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ತಾರೆ ಮಧುಬಾಲಾ, ಎರಡು ದಶಕಗಳ ವೃತ್ತಿಜೀವನದಲ್ಲಿ 70ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ 36ನೇ ವಯಸ್ಸಿನಲ್ಲಿ ನಿಧನರಾದರು. ಅವರ ಪಾತ್ರಕ್ಕೆ ಸಾರಾರನ್ನು ಆಯ್ಕೆ ಮಾಡಿರುವ ನಿರ್ದೇಶಕ ಜಸ್ಮೀತ್​ ಕೆ. ರೀನ್​, ಇದನ್ನೆಲ್ಲ ಹೇಗೆ ಪರಿಗಣಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net