‘ಬಾಫ್ಟಾದಲ್ಲಿ ಭಾರತ ಮಿಂಚು : ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮಣಿಪುರಿ ‘ಬೂಂಗ್’

ಬೂಂಗ್ ಚಿತ್ರದ ಪೋಸ್ಟರ್​
ಬೂಂಗ್ ಚಿತ್ರದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಷ್ಠಿತ ಬಾಫ್ಟಾದಲ್ಲಿ ಮಿಂಚಿದ ಮಣಿಪುರಿ ಚಿತ್ರ
  • ಬೂಂಗ್ ಚಿತ್ರಕ್ಕೆ ಪ್ರಧಾನಿ ಮೋದಿ ಸೇರಿ ಬಾಲಿವುಡ್ ಸ್ಟಾರ್​ ಗಳಿಂದ ಶುಭಾಶಯ ಸಲ್ಲಿಕೆ
  • ವಿಶ್ವಮಟ್ಟದಲ್ಲಿ ಛಾಪು ಮೂಡಿಸಿದ ಈಶಾನ್ಯ ರಾಜ್ಯದ ಮಕ್ಕಳ ಸಿನಿಮಾ
ಪ್ರತಿಷ್ಠಿತ ಬ್ರಿಟಿಷ್ ಆಕಾಡೆಮಿ ಫಿಲಂ ಆ್ಯಂಡ್ ಟೆಲಿವಿಷನ್ ಅವಾರ್ಡ್ಸ್‌ನ (ಬಾಫ್ಟಾ) 79ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ಸಾಧನೆ ಮೆರೆದಿದೆ. ಅತ್ಯುತ್ತಮ ಮಕ್ಕಳು ಮತ್ತು ಕುಟುಂಬ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಣಿಪುರಿ ಚಿತ್ರ ‘ಬೂಂಗ್’ ಪ್ರಥಮ ಸ್ಥಾನ ಪಡೆದಿದೆ. ಆ ಮೂಲಕ ಈಶಾನ್ಯ ಭಾರತದ ಚಿತ್ರವೊಂದು ವಿಶ್ವಮಟ್ಟದಲ್ಲಿ ಛಾಪು ಮೂಡಿಸಿದೆ. ಲಕ್ಷ್ಮೀಪ್ರಿಯ ದೇವಿ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಬಾಲಿವುಡ್ ನಟ ರ್ಹಾನ್ ಅಖ್ತರ್ ಸೇರಿ ಹಲವರು ಬಂಡವಾಳ ಹೂಡಿದ್ದಾರೆ. ಬಾಲನಟರಾದ ಗುಗುನ್ ಕಿಪ್ಗೆನ್, ಬಾಲಾ ಹಿಜಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ವಿಭಾಗದಲ್ಲಿ ಹಾಲಿವುಡ್‌ನ ‘ಜೂಟೊಪಿಯಾ -2’, ‘ಲಿಲೊ ಆ್ಯಂಡ್ ಸ್ಟಿಚ್’ ಹಾಗೂ ್ರೆಂಚ್‌ನ ‘ಆರ್ಕೋ’ ಚಿತ್ರಗಳ ಜತೆ ‘ಬೂಂಗ್’ ಸ್ಪರ್ಧಿಸಿ ಈ ಸಾಧನೆ ಮಾಡಿರುವುದು ವಿಶೇಷ. ಈಗಾಗಲೇ ‘ಟೊರೆಂಟೊ’, ‘ವಾರ್ಸಾ’, ‘ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್’ ಸೇರಿ ಹಲವು ಅಂತಾರಾಷ್ಟ್ರೀಯ ಮತ್ತು ದೇಶೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿರುವ ‘ಬೂಂಗ್’ಗೆ ಇದೀಗ ಮತ್ತೊಂದು ವಿಶ್ವ ಹೆಗ್ಗಳಿಕೆ ಸಂದಿದೆ. ಪ್ರಧಾನಿ ನರೇಂದ್ರ ಮೋದಿ, ಮಣಿಪುರ ಸಿಎಂ ಖೇಮ್‌ಚಂದ್ ಸಿಂಗ್, ತಾರೆಯರಾದ ಪ್ರಿಯಾಂಕಾ ಚೋಪ್ರಾ, ಕಂಗನಾ ರಣಾವತ್ ಸೇರಿ ಹಲವರು ಚಿತ್ರತಂಡಕ್ಕೆ ಅಭಿನಂದಿಸಿದ್ದಾರೆ. ‘‘ಬೂಂಗ್’ ಚಿತ್ರದೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆಗಳು. ಇದು ನಿಜಕ್ಕೂ ಅಪಾರ ಸಂತೋಷದ ಕ್ಷಣ. ವಿಶೇಷವಾಗಿ ಮಣಿಪುರಕ್ಕೆ ವಿಶೇಷ ಕ್ಷಣ. ಇದು ನಮ್ಮ ದೇಶದ ಸೃಜನಶೀಲ ಪ್ರತಿಭೆನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ತೋರಿಸುತ್ತದೆ’ ಎಂದು ಪ್ರಧಾನಿ ಮೋದಿ ಚಿತ್ರತಂಡವನ್ನು ಅಭಿನಂದಿಸಿದ್ದಾರೆ. -ಏಜೆನ್ಸೀಸ್

ಧರ್ಮೇಂದ್ರ ಸ್ಮರಣೆ, ಆಲಿಯಾ ಮೆರುಗು

ಲಂಡನ್‌ನ ‘ಬಾಫ್ಟಾ ಪ್ರಶಸ್ತಿ ಸಮಾರಂಭದಲ್ಲಿ ಕಳೆದ ವರ್ಷ ನಿಧನರಾದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರಿಗೆ ಗೌರವ ಸಲ್ಲಿಸಲಾಗಿದೆ. ಈ ಮೂಲಕ ಅಗಲಿದ ಹಿರಿಯ ನಟ ಸಾಧನೆಯನ್ನು ವಿಶ್ವ ವೇದಿಕೆಯಲ್ಲಿ ಸ್ಮರಿಸಲಾಯಿತು. ಇನ್ನು ಬಾಲಿವುಡ್ ನಟಿ ಆಲಿಯಾ ಭಟ್ ಮೊದಲ ಬಾರಿಗೆ ‘ಬಾಫ್ಟಾ’ದಲ್ಲಿ ಪಾಲ್ಗೊಂಡು ಚಿತ್ರೋತ್ಸವಕ್ಕೆ ಮೆರುಗು ತಂದರು. ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಪ್ರಶಸ್ತಿ ಘೋಷಣೆ ಮಾಡಲು ಬಂದ ನಟಿಯು ‘ನಮಸ್ಕಾರ’ ಎಂದು ಹಿಂದಿಯಲ್ಲಿ ಭಾಷಣ ಆರಂಭಿಸಿ ಗಮನಸೆಳೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net